×
Ad

ಇಸ್ಲಾಂ ನಿಂದಕ ಹೆಗಡೆ ಬಂಧನಕ್ಕೆ ಆಗ್ರಹಿಸಿ ಭಟ್ಕಳ ಬಂದ್

Update: 2016-03-05 12:55 IST

ಭಟ್ಕಳ, ಮಾ.5: ಇಸ್ಲಾಂ ಕುರಿತಂತೆ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಲ್ಲದೆ ತನ್ನ ಹೇಳಿಕೆ ಯುನಿವರ್ಸಲ್‌ ಟ್ರ್ಯುತ್‌ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಕೆನರಾ ಲೋಕಸಭಾಕ್ಷೇತ್ರದ ಬಿಜೆಪಿ ಸಂಸದ ಅನಂತ್‌ ಕುಮಾರ್ ಹೆಗಡೆಯನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಘಟನೆ ಹಾಗೂ ಜಿಲ್ಲೆಯ ವಿವಿಧ ಮುಸ್ಲಿಮ್ ಸಂಘಟನೆಗಳು ಜಿಲ್ಲಾ ಬಂದ್ ಗೆ ಕರೆ ನೀಡಿದ್ದು ಭಟ್ಕಳದಲ್ಲಿ ಬಂದ್ ಯಶಸ್ವಿಯಾಗಿದೆ.

ಶನಿವಾರ ಬೆಳಗ್ಗೆಯಿಂದ ಇಲ್ಲಿನ   ಅಂಗಡಿಗಳು ಬಂದ್‌ ಆಗಿದ್ದು ಶಿಕ್ಷಣ ಸಂಸ್ಥೆ, ಶಾಲಾ ಕಾಲೇಜುಗಳ ಆಡಳಿತ ಮಂಡಳಿ ತಮ್ಮ ಸಂಸ್ಥೆಗಳಿಗೆ ರಜೆ ಘೋಷಿಸಿ ಬಂದ್ ಗೆ ಸಾತ್ ನೀಡಿದರು.

ನಗರದ ಮುಖ್ಯ ರಸ್ತೆ, ಮಗ್ದೂಮ್ ಕಾಲೋನಿ, ಮದೀನಾ ಕಾಲೋನಿ, ಆಝಾದ್ ನಗರ್ ಶೇ.100 ಬಂದ್ ಮಾಡಲಾಯಿತು.ಬ್ಯಾಂಕುಗಳು ಕೂಡ ಗ್ರಾಹಕರಿಲ್ಲದೆ ಒಂದುರೀತಿಯ ಬಂದ್‌ಆಚರಿಸುವಂತಾಯಿತು.


ಹಿಂದೂಗಳಿಂದ ಮಿಶ್ರ ಪ್ರತಿಕ್ರಿಯೆ: ಮುಸ್ಲಿಮ್ ಸಂಘಟನೆಗಳು ಭಟ್ಕಳ ಬಂದ್ ನೀಡಿದ ಕರೆಗೆಇಲ್ಲಿನ ಹಿಂದೂ ಬಾಂಧವರು ಮಿಶ್ರ ಪ್ರತಿಕ್ರಿಯೆಯನ್ನು ತೋರಿಸಿದರು. ಕೆಲವು ರಿಕ್ಷಾ ಚಾಲಕರು, ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಾಥ್ ನೀಡಿದರು.


ಬಿಗು ಬಂದೋಬಸ್ತ್: ಬಂದ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಲಂ 144 ನಿಷೇದಾಜ್ಞೆ ಜಾರಿಗೊಳಿಸಿದ್ದು ಯಾವುದೇ ಸಭೆ ಸಮಾರಂಭಗಳಿಗೆ ಆಸ್ಪದ ನೀಡದೆ ಭಟ್ಕಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬಂದ್ ಶಾಂತ: ಭಟ್ಕಳ ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ಇಲ್ಲಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಂದ್ ವೇಳೆ ಶಾಂತಿ ಸ್ಥಾಪಿಸುವಂತಾಗಲು ಪೊಲೀಸರೊಂದಿಗೆ ಸಹಕರಿಸಿದರು.

ಶುಕ್ರವಾರ ಎಲ್ಲ ಮಸೀದಿಗಳಲ್ಲಿ ಬಂದ್ ಸಂದರ್ಭದಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂಬ ಸಂದೇಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಟ್ಕಳದ ಮುಸ್ಲಿಮ ಸಮುದಾಯದ ಯುವಕರು ಯಾವುದೇ ಗಲಭೆ ಗೊಂದಲಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ಬಂದ್ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News