ಕಿನ್ನಿಗೋಳಿ: ಬಸ್ ಮಾಲಕರನ್ನು ಬೆದರಿಸಿ ಹಗಲು ದರೋಡೆ ಮಾಡಲಾಗುತ್ತಿದೆ - ದುರ್ಗಾ ಪ್ರಸಾದ್ ಹೆಗ್ಡೆ
ಕಿನ್ನಿಗೋಳಿ, ಮಾ.5: ಎನ್‌ಐಟಿಕೆ ಟೋಲ್ ಗೇಟ್ ಖಾಸಗಿ ಬಸ್‌ಗಳಿಗೆ ಪ್ರತಿ ಟ್ರಪ್‌ಗೆ 75 ರೂ. ವಿಧಿಸುವ ಮೂಲಕ ಬಸ್ ಮಾಲಕರನ್ನು ಬೆದರಿಸಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಕಿನ್ನಿಗೋಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಆರೋಪಿಸಿದ್ದಾರೆ.
ಇಂದು ಕಿನ್ನಿಗೋಳಿ ಯುಗಪರುಷದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬಸ್ ಮಾಲಕರು ಪ್ರತಿ ತಿಂಗಳಿಗೆ 32 ಸಾವಿರ ರೂ. ತೆರಿಗೆ ಪಾವತಿಸುತ್ತಿದ್ದಾರೆ. ಅಲ್ಲದೆ, ತಿಂಗಳಿಗೆ 5100 ರೂ. ಟೋಲ್ ಶುಲ್ಕ ಪಾವಸಬೇಕು. ಇಲ್ಲದಿದ್ದಲ್ಲಿ ಪ್ರತೀ ಟ್ರಿಪ್‌ಗೆ ರೂ.75 ಪಾವತಿಸಬೇಕು ಎಂದು ಟೋಲ್‌ಗೇಟ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ ಎಂದರು.
ಈ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಬಸ್ ಮಾಲಕರು ಟೋಲ್‌ಗೇಟ್ ಮಾಲಕರೊಂದಿಗೆ ಕಳೆದ ಡಿಸೆಂಬರ್‌ನಲ್ಲಿ ಸಭೆ ನಡೆಸಿದ್ದು, ಕಂಪನಿ ನಷ್ಟದಲ್ಲಿರುವ ಕಾರಣ ನಷ್ಟ ಸರಿದೂಗುವ ವರೆಗೆ ಮಾತ್ರ ತಿಂಗಳಿಗೆ 5100 ರೂ. ಪಾವತಿಸಬೇಕೆಂದು ಬೇಡಿಕೆ ಇಟ್ಟಿದ್ದು, ಬಳಿಕ ಟೋಲ್ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ್ದ ಕಾರಣ ಫೆಬ್ರವರಿಯ ವರೆಗೆ ಎಲ್ಲ ಮಾಲಕರು ಶುಲ್ಕ ಪಾವತಿಸಿದ್ದಾರೆ. ಆದರೆ, ಈ ಸಂಸ್ಕೃತಿ ಅಂತೆಯೇ ಮುಂದುವರಿಯುತ್ತಿದ್ದು ಭರವಸೆ ಕೇವಲ ಭರವಸೇಯಾಗಿಯೇ ಉಳಿದಿದೆ ಎಂದು ಆರೋಪಿಸಿದರು.
ಈ ಬಗ್ಗೆ ಟೋಲ್‌ಗೇಟ್ ಮಾಲಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಸ್ವೀಕರಿಸದೇ ಗೂಂಡಾಗಳನ್ನು ಬಿಟ್ಟು ಬಸ್‌ಗಳನ್ನು ಟೋಲ್‌ಗೇಟ್ ಬಳಿ ತಡೆಹಿಡಿದು ಗೋಂಡಾ ವರ್ತನೆ ಪ್ರದರ್ಶಿಸುತ್ತಿದ್ದಾರೆ ಎಂದು ಗಭೀರವಾಗಿ ದೂರಿದ್ದಾರೆ.
ಈ ಸಂಬಂಧ ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರು ಶೀಘ್ರ ಮಧ್ಯಸ್ಥಿಕೆ ವಹಿಸಿ ಸಮಾಜ ಸೇವೆ ನೀಡುತ್ತಿರುವ ಬಸ್‌ಗಳು ಸುಸೂತ್ರವಾಗಿ ಚಾಲಾಯಿಸುವ ಮತ್ತು ಸಾರ್ವಜನಿಕ ಸೇವೆ ನೀಡಲು ಸಹಕರಿಸಲು ಮುಂದಾಗಬೇಕು. ಇಲ್ಲವಾದಲ್ಲಿ, ಕಿನ್ನಿಗೋಳಿ ಬಸ್ ಚಾಲಕ ನಿರ್ವಾಹಕರ ಸಂಘ, ಸಿಟಿ ಬಸ್ ಮಾಲಕರ ಸಂಘ, ಎಕ್ಸ್ ಪ್ರಸ್ ಬಸ್ ಚಾಲಕರು ಮತ್ತು ಚಾಲಕರ ಸಂಘ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳನ್ನು ಈಗಾಗಲೇ ಸಹಕಾರ ನೀಡುವ ಬಗ್ಗೆ ತಿಳಿಸಿದ್ದು, ಎಲ್ಲ ಸಂಘಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಸ್ ಮಾಲಕರ ಸಂಘದ ಶಶಿ ಅಮೀನ್, ಜಗದೀಶ್ ಶೆಟ್ಟಿ, ಸುದೇಶ್ ಮರೋಳಿ, ಸಂದೇಶ್ ಪೈ, ಸಂತೋಷ್ ಶೆಟ್ಟಿ, ಕಿನ್ನಿಗೋಳಿ ಬಸ್ ಚಾಲಕ ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ್ ಪೂಜಾರಿ, ಗುಲಾಮ್ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು.