×
Ad

ಕಾರ್ಕಳ : ಸಾಂತಾಯಣ ಕೃತಿ ಲೋಕಾರ್ಪಣೆ

Update: 2016-03-05 18:44 IST

ಕಾರ್ಕಳ: ಇಂದಿನ ದಿನಗಳಲ್ಲಿ ಸಾಹಿತ್ಯ, ಸಂಗೀತ, ಕಲೆ, ಕಾವ್ಯ ರಚನೆಗಳ ಮೂಲಕ ಪ್ರತಿಭೆ ತೋರಿಸಲು ಹೆಚ್ಚೆಚ್ಚು ಅವಕಾಶಗಳಿವೆ. ಈ ಅವಕಾಶ ಬಳಸಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ಮನದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಅಭಿಪ್ರಾಯಗಳ ಅಭಿವ್ಯಕ್ತಿಗೆ ಸಾಹಿತ್ಯ ಕ್ಷೇತ್ರವು ಉತ್ತಮ ವೇದಿಕೆ ಎಂದು ಲಯನ್ಸ್ ಕ್ಲಬ್ ಉಡುಪಿ ಸದರ್ನ್‌ಸ್ಟಾರ್ ಅಧ್ಯಕ್ಷೆ ಸಾಧನಾ ಮಲ್ಯ ಹೇಳಿದ್ದಾರೆ. ಅವರು ಎಸ್.ವಿ. ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹೊಸಸಂಜೆ ಪ್ರಕಾಶನದ ತೃತೀಯ ಪ್ರಕಟಣೆ ಗುರುರಾಜ ಮಾರ್ಪಳ್ಳಿಯವರ ಮಿಸ್ಟರ್ ಸಾಂತಾಯಣ ಮತ್ತು ಇತರ ಕಥೆಗಳು ಕಥಾಸಂಕಲನ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಟ್ಟುಪಾಡು, ನಿಯಮನಿಷ್ಠೆಯ ನಾಲ್ಕು ಗೋಡೆಯ ಪ್ರತಿಭೆ ಮುರುಟಿ ಹೋಗುತ್ತಿದ್ದ ಕಾಲ ಮರೆಯಾಗಿದೆ. ಅರ್ಥವಿಲ್ಲದ ಕಟ್ಟುಪಾಡು ನಿಷೇಧಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಹೆಣ್ಣು ಮಕ್ಕಳು ತೋರಬೇಕು. ಪ್ರಶ್ನಿಸುವ ಮನೋಭಾವ ಜತೆಗೆ ಸೃಜನಾತ್ಮಕ ಬರವಣಿಗೆಯೊಂದಿಗೆ ಕುತೂಹಲದ ಬುಗ್ಗೆಗಳಾಗಿ ಪುಟಿದೇಳಬೇಕು ಎಂದು ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕೃತಿ ಲೋಕಾರ್ಪಣೆಗೈದರು. ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ. ಯ ನ್ಯಾಯವೈದ್ಯ ಶಾಸ್ತ್ರ ಮರಣೋತ್ತರ ಪರೀಕ್ಷೆ ವಿಭಾಗ ನಿವೃತ್ತ ಮುಖ್ಯಸ್ಥ ಡಾ.ನಾಗೇಶ್ ಕುಮಾರ್ ಜಿ.ರಾವ್, ಜಯಂಟ್ಸ್ ಇಂಟರ್‌ನ್ಯಾಷನಲ್ ಉಡುಪಿ ಅಧ್ಯಕ್ಷ ವಿಶ್ವನಾಥ ಶೆಣೈ, ಲೇಖಕ ಗುರುರಾಜ ಮಾರ್ಪಳ್ಳಿ, ಪಾಂಪೈ ಜೂನಿಯರ್ ಕಾಲೇಜು ಕಿನ್ನಿಗೋಳಿಯ ನಿವೃತ್ತ ಅಧ್ಯಾಪಕ ಬಿ.ಸೀತಾರಾಮ ಭಟ್, ಹಿರಿಯ ಪತ್ರಕರ್ತ ಕೆ.ಪದ್ಮಾಕರ ಭಟ್, ಪ್ರಕಾಶಕ ಆರ್.ದೇವರಾಯ ಪ್ರಭು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲತಾ ರೆಂಜಾಳ ಸ್ವಾಗತಿಸಿದರು. ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಅಶೋಕ್ ಕ್ಲಿಫರ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಜಾತ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News