ಸುಳ್ಯದಲ್ಲಿ ಬಿಜೆಪಿಯಿಂದ ವಿಜಯೋತ್ಸವ - ಕಾರ್ಯಕರ್ತರಿಗೆ ಅಭಿನಂದನೆ
ಸುಳ್ಯ: ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ವಿಜೇತರಿಗೆ ಅಭಿನಂದನೆ, ಮತದಾರರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಮಾರಂಭವು ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ನಡೆಯಿತು.
ಶಾಸ್ತ್ರಿ ಸರ್ಕಲ್‌ನಿಂದ ಮೆರವಣಿಗೆ ಆರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡಿತು.
ಸಂಸದರ ಆರೋಪ:
ಸಮಾರೋಪದಲ್ಲಿ ಪಾಲ್ಗೊಂಡ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ನೋಡಿ ಮತದಾರರು ಮೌಲ್ಯಮಾಪನ ಮಡಿದ್ದಾರೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಮಾತ್ರ ಮಲಗಿರೋದಲ್ಲ. ಅವರ ಮಂತ್ರಿ ಮಂಡಲವೇ ಮಲಗಿದೆ. ಪರಿಣಾಮ ರಾಜ್ಯವೇ ಮಲಗಿದಂತಾಗಿದೆ. ಇಂತಹ ಸ್ಥಿತಿಯಲ್ಲಿ ಎಚ್ಚರಿಸುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು. ದಕ್ಷಿಣ ಕನ್ನಡದ ನಾಲ್ಕು ಸಚಿವರು ಕೂಡಾ ಮಲಗಿದ್ದಾರೆ. ಅವರಿಗೆ ಜಿಲ್ಲೆಯ ಅಭಿವೃದ್ಧಿ ಬೇಕಿಲ್ಲ. ಅವರೆಲ್ಲ ಮರ ಮತ್ತು ಮರಳು ಮಾಫಿಯಾದಲ್ಲಿ ಮುಳುಗಿದ್ದಾರೆರೆ. ಇವರು ಇನ್ನಷ್ಟು ದಿನ ಇದ್ದರೆ ನೇತ್ರಾವತಿಯಲ್ಲಿ ಮರಳೂ ಉಳಿಯದು, ಸಂಪಾಜೆ ಕಾಡಿನಲ್ಲಿ ಮರವೂ ಉಳಿಯದು ಎಂದು ಕಟೀಲ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯ್ ಮಾತನಾಡಿ, ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ದೊರಕಿಸಿಕೊಟ್ಟ ಮತದಾರರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದರು.
ಸುಳ್ಯ ಶಾಸಕ ಅಂಗಾರ ಮಾತನಾಡಿ, 1994 ರ ನಂತರ ಈ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆದ್ದು ಬರುತ್ತಿದೆ. ಆದರೂ ನಾವು ದುರಹಂಕಾರ ಪ್ರದರ್ಶಿಸಿಲ್ಲ. ನನ್ನ ಬಗ್ಗೆ ಕಾಂಗ್ರೆಸಿಗರು ಎಷ್ಟೇ ಟೀಕೆ ಮಾಡಿದರೂ ನಾನು ಉತ್ತರಿಸಲು ಹೋಗಿಲ್ಲ. ಆದರೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ, ಪ್ರಮೀಳಾ ಜನಾರ್ದನ, ತಾಲೂಕು ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಬೊಳ್ಳೂರು, ಉದಯ ಕೊಪ್ಪಡ್ಕ , ಪುಷ್ಪಾ ಮೇದಪ್ಪ, ಚನಿಯ ಕಲ್ತಡ್ಕ, ಜಾಹ್ನವಿ ಕಾಂಚೊಡು, ಪದ್ಮಾವತಿ, ಯಶೋದಾ ಬಾಳೆಗುಡ್ಡೆ, ಕುಸುಮಾ, ಶುಭದಾ ರೈ, ವಿದ್ಯಾಲಕ್ಷ್ಮಿ ಎರ್ಮೆಟ್ಟಿ ಯವರನ್ನು ಅಭಿನಂದಿಸಲಾಯಿತು. ಹಿರಿಯ ಬಿಜೆಪಿ ನಾಯಕ ಡಾ.ರಾಮಯ್ಯ ಭಟ್, ಭಾಗೀರಥಿ ಮುರುಳ್ಯ, ನ.ಪಂ.ಅಧ್ಯಕ್ಷ ಪ್ರಕಾಶ್ ಹೆಗ್ಡೆ ವೇದಿಕೆಯಲ್ಲಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ ಜಿಲ್ಲಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ ಪ್ರಸ್ತಾವನೆಗೈದರು. ನಗರ ಬಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಂದಿಸಿದರು. ವೆಂಕಟ್ ದಂಬೆಕೋಡಿ ಕಾರ್ಯಕ್ರಮ ನಿರೂಪಿಸಿದರು.