ಚುಟುಕು ಸುದ್ದಿಗಳು
ಇಂದಿನ ಕಾರ್ಯಕ್ರಮ
ಶೈಕ್ಷಣಿಕ ಶಿಬಿರ: ಯಕ್ಷಗಾನ ಕಲಾರಂಗದಿಂದ ಆಯೋಜಿಸಲ್ಪಡುವ ವಿದ್ಯಾಪೋಷಕ್‌ನ ವಿದ್ಯಾರ್ಥಿಗಳಿಗೆ 5 ದಿನಗಳ ಶೈಕ್ಷಣಿಕ ಸನಿವಾಸ ಶಿಬಿರದ ಉದ್ಘಾಟನೆ. ಸಮಯ: ಸಂಜೆ 4:00ಕ್ಕೆ. ಸ್ಥಳ: ಅಂಬಲಪಾಡಿ ಲಕ್ಷ್ಮೀಜನಾರ್ಧನ ದೇವಳದ ಭವಾನಿ ಮಂಟಪ, ಅಂಬಲಪಾಡಿ ಉಡುಪಿ. ರಂಗೋತ್ಸವ-ವಿಜಯೋತ್ಸವ: ರಂಗಭೂಮಿಯಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಗುರುತಿಸಿಕೊಂಡಿರುವ ತೋನ್ಸೆ ವಿಜಯ ಕುಮಾರ್ ಶೆಟ್ಟಿಗೆ ಹುಟ್ಟೂರಿನ ಅಭಿನಂದನಾ ಸಮಾರಂಭ, ರಂಗೋತ್ಸವ -ವಿಜಯೋತ್ಸವ. ಸಮಯ: ಅಪರಾಹ್ನ 3 ರಿಂದ ರಾತ್ರಿ 10ರವರೆಗೆ. ಸ್ಥಳ: ಪುರಭವನ, ಅಜ್ಜರಕಾಡು ಉಡುಪಿ.ವರ್ಣೋದಯ ಚಿತ್ರಕಲಾ ಶಿಬಿರ: ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ಕಿದಿಯೂರು ಸ್ಕೂಲ್ ಆಫ್ ಆರ್ಟ್ಸ್ ಉಡುಪಿ ಇದರ ನೇತೃತ್ವದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ‘ವರ್ಣೋದಯ’ದಲ್ಲಿ ಭಾವಚಿತ್ರ ಪ್ರಾತ್ಯಕ್ಷಿಕೆ ಮತ್ತು ಶಾಲಾ, ಕಾಲೇಜು ಹಾಗೂ ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆ. ಬಳಿಕ ಸಮಾರೋಪ ಸಮಾರಂಭ. ಸಮಯ: ಪೂರ್ವಾಹ್ನ 11ರಿಂದ ಹಾಗೂ ಸಂಜೆ 4ರಿಂದ. ಸ್ಥಳ: ಲಯನ್ಸ್ ಭವನ, ಬ್ರಹ್ಮಗಿರಿ, ಉಡುಪಿ. ಗಾಯನ ಸಂಭ್ರಮ: ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ತ್ರಿವಳಿ ಗಾಯನ ಕಲಾವಿದರ 300ನೆ ಗಾಯನ ಸಂಭ್ರಮ. ಬೆಳಗ್ಗೆ 9ರಿಂದ ದಾಸರ ಪದಗಳ ಸ್ಪರ್ಧೆ, ಅಪರಾಹ್ನ 1:15ರಿಂದ ಯಕ್ಷಭಕ್ತಿ ಸಂಗೀತ, ಹರಿನಾಮ ಸಂಕೀರ್ತನೆ, ದಾಸ ನಮನ, ಸಂಜೆ 4:10ರಿಂದ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯರಿಂದ ದಾಸವಾಣಿ. ಸಂಜೆ 5ರಿಂದ ಸಮಾರೋಪ. 6ಕ್ಕೆ ಪೇಜಾವರ ಶ್ರೀಗಳಿಂದ ಪ್ರವಚನ, ಸಂಜೆ 7ರಿಂದ ತ್ರಿವಳಿಗಾನಾಮೃತಂ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.ವರ್ಣ ನಿರಂತರ: ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಾರ್ಷಿಕ ಚಿತ್ರಕಲಾ ಪ್ರದರ್ಶನ ‘ವರ್ಣ ನಿರಂತರ- 2016’. ಸಮಯ: ಬೆಳಗ್ಗೆ 10ರಿಂದ ಸಂಜೆ 4ರವರೆಗೆ. ಸ್ಥಳ: ಚಿತ್ರಕಲಾ ಮಂದಿರ, ಸಿಟಿ ಬಸ್ ನಿಲ್ದಾಣದ ಬಳಿ ಉಡುಪಿ.ಬಹುಮಾನ ವಿತರಣೆ: ಅಲೆವೂರಿನ ನೆಹರೂ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್‌ನ ವತಿಯಿಂದ ನಡೆದ 25ನೆ ವರ್ಷದ ಹೊನಲು ಬೆಳಕಿನ ‘ಶ್ಯಾಮಸುಂದರಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟದ ಸಮಾರೋಪ ಹಾಗೂ ಬಹುಮಾನ ವಿತರಣೆ. ಸಮಯ: ಬೆಳಗ್ಗೆ 8ಕ್ಕೆ ಸ್ಥಳ: ನೆಹರೂ ಕ್ರೀಡಾಂಗಣ, ಅಲೆವೂರು ಉಡುಪಿ ರಾಷ್ಟ್ರೀಯ ರಂಗೋತ್ಸವ: ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ 6ನೆ ವರ್ಷದ ರಾಷ್ಟ್ರೀಯ ರಂಗೋತ್ಸವದಲ್ಲಿ ಬೆಳಗ್ಗೆ 9:30ರಿಂದ ಮುದ್ರಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರ, ಸಂಜೆ 7ಕ್ಕೆ ಸಭಾ ಕಾರ್ಯಕ್ರಮ. 7:30ರಿಂದ ಹಾರಾಡಿಯ ಭೂಮಿಕಾ ತಂಡದಿಂದ ಬಿ.ಎಸ್. ರಾಮ ಶೆಟ್ಟಿ ಅವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಅರಗಿನ ಬೆಟ್ಟ’. ಸ್ಥಳ: ನಾಟ್ಕದೂರು, ಮುದ್ರಾಡಿ ಗಾಳ ಶಿಕಾರಿ ಸ್ಪರ್ಧೆಗೆ ಚಾಲನೆ: ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಗಾಳ ಶಿಕಾರಿ ಸ್ಪರ್ಧೆಗೆ ಚಾಲನೆ ಮತ್ತು ಆ್ಯಂಗ್ಲಿಂಗ್ ಕ್ಲಬ್ ಉದ್ಘಾಟನೆ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ದೋಣಿ ವಿಹಾರ ಕೇಂದ್ರ, ಡಾ. ಶಿವರಾಮ ಕಾರಂತ ನಿಸರ್ಗಧಾಮ, ಪಿಲಿಕುಳ, ಮಂಗಳೂರು. ಮತ್ಸ ಮೇಳ ಸಮಾರೋಪ: ರಾಷ್ಟ್ರೀಯ ಮತ್ಸಮೇಳದ ಸಮಾರೋಪ ಸಮಾರಂಭ. ಸಮಯ: ಸಂಜೆ 4ಕ್ಕೆ. ಸ್ಥಳ: ಟಿಎಂಎ ಪೈ ಕನ್ವೆನ್ಷನ್ ಸೆಂಟರ್, ಮಂಗಳೂರು. ಗಣಿ, ಭೂವಿಜ್ಞಾನ
ಸಚಿವರ ಪ್ರವಾಸ
ಮಂಗಳೂರು, ಮಾ.5: ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರು ಮಾ.6ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ರವಿವಾರ ಪೂರ್ವಾಹ್ನ 11:30ಕ್ಕೆ ವಿಮಾನದ ಮೂಲಕ ಮಂಗಳೂರು ತಲುಪಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಸುವರು. ಮಧ್ಯಾಹ್ನ 1 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಡಿ ನೀಡಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 5:30ಕ್ಕೆ ಪುತ್ತೂರಿನಲ್ಲಿ ನಡೆಯುವ ಕೋಟಿ-ಚೆನ್ನಯ ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ 9ಕ್ಕೆ ಪುತ್ತೂರಿನಿಂದ ಧಾರವಾಡಕ್ಕೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಸುಳ್ಯ: ನೂತನ ಸದಸ್ಯರಿಗೆ ಅಭಿನಂದನೆ
ಸುಳ್ಯ, ಮಾ.5: ತಾಪಂ, ಜಿಪಂ ಚುನಾವಣೆಯಲ್ಲಿ ವಿಜೇತರಿಗೆ ಅಭಿನಂದನೆ, ಮತದಾರರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭವು ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ನಡೆಯಿತು. ಶಾಸ್ತ್ರಿ ಸರ್ಕಲ್‌ನಿಂದ ಮೆರವಣಿಗೆ ಆರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡಿತು. ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಅಂಗಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯ್ಕಾ ಮಾತನಾಡಿದರು. ಜಿಪಂ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ, ಪ್ರಮೀಳಾ ಜನಾರ್ದನ, ತಾಪಂ ಸದಸ್ಯರಾದ ರಾಧಾಕೃಷ್ಣ ಬೊಳ್ಳೂರು, ಉದಯ ಕೊಪ್ಪಡ್ಕ, ಪುಷ್ಪಾಮೇದಪ್ಪ, ಚನಿಯ ಕಲ್ತಡ್ಕ, ಜಾಹ್ನವಿ ಕಾಂಚೊಡು, ಪದ್ಮಾವತಿ, ಯಶೋದಾ ಬಾಳೆಗುಡ್ಡೆ, ಕುಸುಮಾ, ಶುಭದಾ ರೈ, ವಿದ್ಯಾಲಕ್ಷ್ಮೀ ಎರ್ಮೆಟ್ಟಿ ಯವರನ್ನು ಅಭಿನಂದಿಸಲಾಯಿತು. ಹಿರಿಯ ಬಿಜೆಪಿ ನಾಯಕ ಡಾ.ರಾಮಯ್ಯ ಭಟ್, ಭಾಗಿರಥಿ ಮುರುಳ್ಯ, ಪಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ವೇದಿಕೆಯಲ್ಲಿದ್ದರು.)
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಎ.ವಿ. ತೀರ್ಥರಾಮ ಪ್ರಾಸ್ತಾವಿಸಿದರು. ನಗರ ಬಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ವಂದಿಸಿದರು. ವೆಂಕಟ್ ದಂಬೆಕೋಡಿ ಕಾರ್ಯಕ್ರಮ ನಿರೂಪಿಸಿದರು.
ಇಂದು ಕುರ್‌ಆನ್ ತರಗತಿ
ಮಂಗಳೂರು, ಮಾ.5: ನಗರದ ಇಸ್ಲಾಮಿಕ್ ದಅ್ವಾ ಸೆಂಟರ್ ವತಿಯಿಂದ ‘ಇಸ್ಲಾಮಿನ ನಂಬಿಕೆಗಳು’ ಎಂಬ ವಿಷಯದಲ್ಲಿ ಕುರ್‌ಆನ್ ಮತ್ತು ಹದೀಸ್ ತರಗತಿಯು ಮಾ.6ರಂದು ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಲಿದೆ. ಮಗ್ರಿಬ್ ನಮಾಝ್‌ನ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಸೆಂಟರ್‌ನ ಅಧ್ಯಕ್ಷ ಬಿ.ಎಂ.ಮುಹಮ್ಮದ್ ರಶೀದ್ ಸಅದಿ ಬೋಳಿಯಾರ್, ಹದೀಸ್ ತರಗತಿ ನಡೆಸಿಕೊಡಲಿದ್ದಾರೆ ಎಂದು ಸೆಂಟರ್‌ನ ಪ್ರಕಟನೆ ತಿಳಿಸಿದೆ.
ಇಂದು ಕಾಲ್ನಡಿಗೆ ಜಾಥಾ
ಪಡುಬಿದ್ರೆ, ಮಾ.5: ಎಸ್ಸೆಸ್ಸೆಫ್ ರಾಜ್ಯ ವ್ಯಾಪಿ ಹಮ್ಮಿಕೊಂಡಿರುವ ‘ಭಯೋತ್ಪಾದನೆ ವಿರುದ್ಧದ ಜಿಹಾದ್’ ಜನಾಂದೋಲನದ ಅಂಗವಾಗಿ ಎಸ್ಸೆಸ್ಸೆಫ್ ಪಡುಬಿದ್ರೆ ಸೆಕ್ಟರ್ ವತಿಯಿಂದ ಸೆಕ್ಟರ್ ವ್ಯಾಪ್ತಿಯ ಮದ್ರಸ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ ಮಾ.6ರಂದು ಬೆಳಗ್ಗೆ 10 ಗಂಟೆಗೆ ಕಂಚಿನಡ್ಕ ಮದ್ರಸದಿಂದ ಪಡುಬಿದ್ರೆ ಪೇಟೆಯವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಕೆ.ಸಿ.ರೋಡ್: ಇಂದು ದ್ಸಿಕ್ರ್ ಮಜ್ಲಿಸ್
ಮಂಗಳೂರು, ಮಾ.5: ತಲಪಾಡಿ ಕೆ.ಸಿ.ರೋಡ್‌ನ ಅಲ್- ಮುಬಾರಕ್ ಜುಮಾ ಮಸ್ಜಿದ್ ವತಿಯಿಂದ ನಡೆಯುವ ಮಾಸಿಕ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಮಾ.6ರಂದು ಮಗ್ರಿಬ್ ನಮಾಝ್ ಬಳಿಕ ಅಲ್ಹಾಜ್ ಕೆ.ಪಿ. ಹುಸೈನ್ ಸಅದಿ ನೇತೃತ್ವದಲ್ಲಿ ಜರಗಲಿದೆ. ಅಂದು ಅಪರಾಹ್ನ 2ರಿಂದ 4ರ ತನಕ ಮಹಿಳಾ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಚೆಂಗಳ: ಇಂದು ಸಿಪಿಎಂನಿಂದ ಹರತಾಳ
ಕಾಸರಗೋಡು, ಮಾ.5: ಸಿಪಿಎಂ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮಾ. 6ರಂದು ಚೆಂಗಳ ಗ್ರಾಪಂ ವ್ಯಾಪ್ತಿಯಲ್ಲಿ ಹರತಾಳಕ್ಕೆ ಸಿಪಿಎಂ ಕರೆ ನೀಡಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹರತಾಳ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಚೆಂಗಳ ಉಪಚುನಾವಣೆ: ಐಕ್ಯರಂಗಕ್ಕೆ ಗೆಲುವು
ಾಸರಗೋಡು, ಮಾ.5: ಚೆಂಗಳ ಗ್ರಾಪಂನ 13ನೆ ವಾರ್ಡ್‌ಗೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಐಕ್ಯರಂಗ ಗೆಲುವು ಸಾಧಿಸಿದೆ. ಚಲಾವಣೆಯಾದ ಒಟ್ಟು 705 ಮತಗಳಲ್ಲಿ 615 ಮತಗಳನ್ನು ಪಡೆದ ಐಕ್ಯರಂಗದ ಸುಫೈಜಾ ಅಬೂಬಕರ್ ಗೆಲುವು ಸಾಧಿಸಿದರು. ಸಿಪಿಎಂನ ಬಾಲಮಣಿಯಮ್ಮ 90 ಮತಗಳನ್ನು ಪಡೆದರು. ಪಂಚಾಯತ್ ಸದಸ್ಯೆಯಾಗಿದ್ದ ಮುಸ್ಲಿಂ ಲೀಗ್‌ನ ಸರೀನಾ ಬಶೀರ್ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಿತು.
ಪಿಲಿಕ್ಕೋಡ್‌ಉಪಚುನಾವಣೆ: ಸಿಪಿಎಂಗೆ ಗೆಲುವು
ಕಾಸರಗೋಡು, ಮಾ.5: ಪಿಲಿಕ್ಕೋಡ್ ಗ್ರಾಪಂನ 8ನೆ ಕೊಡಕ್ಕಾಡ್ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಸಿಪಿಎಂ ಸ್ಥಾನ ಉಳಿಸಿಕೊಂಡಿದೆ.ಸಿಪಿಎಂನ ಟಿ.ಪಿ.ಮೈಮೂನತ್ 1,141 ಮತಗಳ ಅಂತರದಿಂದ ಜಯ ಗಳಿಸಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಲಲಿತಾ 74 ಮತಗಳನ್ನು ಮಾತ್ರ ಗಳಿಸಲು ಶಕ್ತರಾದರು. ಸದಸ್ಯರಾಗಿದ್ದ ವಿ.ಎನ್.ರಾಧಾ ಅವರ ರಾಜೀನಾಮೆಯಿಂದ ಕ್ಷೇತ್ರ ತೆರವಾಗಿತ್ತು.
ಬೈಂದೂರು: ಮಾರ್ಗಸೂಚಿ ಬೆಲೆ ಪ್ರಕಟ
ಉಡುಪಿ, ಮಾ.5: ಜಿಲ್ಲೆಯ ಬೈಂದೂರು ಉಪನೋಂದಣಿ ಕಚೇರಿ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಕುಂದಾಪುರದ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ 2015-16ನೆ ಸಾಲಿಗೆ ಪರಿಷ್ಕರಿಸಿದೆ. ಸಾರ್ವಜನಿಕರ ಗಮನ ಸೆಳೆಯಲು ಬೈಂದೂರು ತಾಲೂಕು ಕಚೇರಿ, ಉಪ ನೋಂದಣಿ ಕಚೇರಿ, ಬೈಂದೂರು, ಲೋಕೋಪಯೋಗಿ ಇಲಾಖೆಯ ಕುಂದಾಪುರ ಮತ್ತು ಬೈಂದೂರು ಸೂಚನಾ ಫಲಕದಲ್ಲಿ ವೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳ ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ.
ಸಾರ್ವಜನಿಕರು ಪ್ರಕಟಗೊಂಡ ದರಪಟ್ಟಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ 15 ದಿನಗಳ ಒಳಗೆ ಸದಸ್ಯ ಕಾರ್ಯದರ್ಶಿಗಳು, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ ಬೈಂದೂರು ಹಾಗೂ ಉಪನೋಂದಣಾಧಿಕಾರಿಗಳು ಬೈಂದೂರು ಇವರಿಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ. ಕುಂದಾಪುರ ಉಪನೋಂದಣಿ ಕಚೇರಿ ವ್ಯಾಪ್ತಿಯೊಳಗಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳನ್ನು ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ 2015-16ನೆ ಸಾಲಿಗೆ ಪರಿಷ್ಕರಿಸಿದೆ. ಅನುಮೋದನೆಗೊಂಡಿರುವ ಪರಿಷ್ಕೃತ ದರಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಪ್ರದೇಶಗಳು, ಕಟ್ಟಡದ ದರಗಳು, ವಾಹನ ಪಾರ್ಕಿಂಗ್ ದರಗಳು ಮತ್ತು ವಿಶೇಷ ಸೂಚನೆಗಳನ್ನು ಸಾರ್ವಜನಿಕರ ಅವಗಾಹನೆಗೆ ತರಲು ಕುಂದಾಪುರದ ಮಿನಿ ವಿಧಾನಸೌಧದ ತಾಲೂಕು ಕಚೇರಿ,ಉಪನೋಂದಣಿ ಕಚೇರಿ, ಕುಂದಾಪುರ ಮುಖ್ಯ ರಸ್ತೆಯಲ್ಲಿರುವ ಪುರಸಭಾ ಕಚೇರಿ ಹಾಗೂ ಲೋಕೋ ಪಯೋಗಿ ಇಲಾಖೆಯ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ." ಸಾರ್ವಜನಿಕರಿಗೆ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಪ್ರಕಟಗೊಂಡ 15 ದಿನಗಳ ಒಳಗೆ ಸದಸ್ಯ ಕಾರ್ಯದರ್ಶಿಗಳು, ಮಾರ್ಗಸೂಚಿ ಮಾರುಕಟ್ಟೆ ಬೆಲೆ ನಿರ್ಧರಣಾ ಉಪಸಮಿತಿ ಕುಂದಾಪುರ ಹಾಗೂ ಉಪನೋಂದಣಾಧಿಕಾರಿಗಳು ಮಿನಿ ವಿಧಾನಸೌಧ, ಕುಂದಾಪುರ ಇವರಿಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಮಾ.10: ಯೆನೆಪೊಯದಲ್ಲಿ ಆರೋಗ್ಯ ಶಿಬಿರ
ಮಂಗಳೂರು, ಮಾ.5: ಕಿಡ್ನಿ ದಿನಾಚರಣೆಯ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ವಿವಿಧ ಆರೋಗ್ಯ ಶಿಬಿರ, ಕಾರ್ಯಕ್ರಮಗಳನ್ನು ಮಾ.10ರಂದು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮುಹಮ್ಮದ್ ಅಮೀನ್ ವಾಣಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಿಡ್ನಿ ದಿನಾಚರಣೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಲ್ಲಿ ಕಿಡ್ನಿ ಮತ್ತು ಮೂತ್ರ ರೋಗ ಕಾಯಿಲೆಗಳನ್ನು ಪತ್ತೆಹಚ್ಚಲು ಆರೋಗ್ಯ ತಪಾಸಣೆ, ವಯಸ್ಕರಲ್ಲಿ ಕಿಡ್ನಿ ಹಾಗೂ ಮೂತ್ರ ರೋಗಗಳ ತಪಾಸಣೆ, ಜಾಗೃತಿ ಶಿಕ್ಷಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ತಪಾಸಣೆ ನಡೆಸಿದಾಗ ಯಾರಲ್ಲಾದರೂ ಕಿಡ್ನಿ ಹಾಗೂ ಮೂತ್ರರೋಗ ಸಂಬಂಧಿ ರೋಗಗಳ ಬಗ್ಗೆ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯೆನೆಪೊಯ ಮೂತ್ರಪಿಂಡ ಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ್ ಪೈ, ಮೂತ್ರರೋಗ ಶಾಸ ವಿಭಾಗ ಮುಖ್ಯಸ್ಥ ಡಾ.ಮುಜಿಬುರ್ರಹ್ಮಾನ್, ಮೂತ್ರಪಿಂಡ ಶಾಸವಿಭಾಗ ಸಹ ಪ್ರಾಧ್ಯಾಪಕ ಡಾ. ನಿಶ್ಚಿತ್ ಡಿಸೋಜ, ವೈದ್ಯಕೀಯ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ.ಮುಹಮ್ಮದ್ ಗುತ್ತಿಗಾರ್ ಉಪಸ್ಥಿತರಿದ್ದರು.
ಮಾ.10: ಅಂಗಾಂಗ ದಾನಿಗಳಿಗೆ ಗೌರವಾರ್ಪಣೆ
ಮಂಗಳೂರು, ಮಾ. 5: ಸಮಾಜದಲ್ಲಿ ಅಂಗಾಂಗ ದಾನದ ಅರಿವು ಹಾಗೂ ದಾನಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಜನಜಾಗೃತಿ ಆಂದೋಲನದ ಭಾಗವಾಗಿ, ಕಿಡ್ನಿ ಒಳಗೊಂಡಂತೆ ದೇಹದ ಇತರ ಅಂಗಾಂಗಗಳನ್ನು ಈಗಾಗಲೇ ದಾನ ಮಾಡಿರುವ ಹಾಗೂ ಮರಣಾ ನಂತರ ದೇಹ ದಾನ ಮಾಡುವ ಉಯಿಲು ಬರೆದಿರುವವರಿಗೆ ಗೌರವಾರ್ಪಣೆ ಮಾಡುವ ವಿಶೇಷ ಕಾರ್ಯಕ್ರಮವನ್ನು ಕಿಡ್ನಿ ರೋಗಿಗಳ ಸಂಘವು ಹಮ್ಮಿಕೊಂಡಿದೆ. ನಗರದ ಪುರಭವನದಲ್ಲಿ ಮಾ.10ರಂದು ನಡೆಯಲಿರುವ ‘ವಿಶ್ವ ಕಿಡ್ನಿ ದಿನಾಚರಣೆ ಮತ್ತು ಕಿಡ್ನಿ ರೋಗಿಗಳ ಸಮಾವೇಶ’ದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಮಾ.8ರ ಒಳಗಾಗಿ ಕಿಡ್ನಿ ರೋಗಿಗಳ ಸಂಘ, ಸಿ-24, 2ನೆ ಮಹಡಿ, ಅಲ್ ರಹಬಾ ಪ್ಲಾಝಾ ಕಟ್ಟಡ, ನೆಲ್ಲಿಕಾಯಿ ರಸ್ತೆ, ಮಂಗಳೂರು - 575001 ಅಥವಾ ದೂ. 0824-4261320 ಮೊ. 9845054191 ಇಮೇಲ್: ಞ್ಞಜಃಜಞಜ್ಝಿ.್ಚಟಞ ಸಂಪರ್ಕಿಸುವಂತೆ ವಿಶ್ವ ಕಿಡ್ನಿ ದಿನಾಚರಣೆ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂದು ಆರೋಗ್ಯ ಸಚಿವರ ಪ್ರವಾಸ
ಮಂಗಳೂರು, ಮಾ.5: ಆರೋಗ್ಯ ಸಚಿವ ಯು.ಟಿ.ಖಾದರ್ ಮಾ.6ರಂದು ಬೆಳಗ್ಗೆ 8:30ಕ್ಕೆ ಸರ್ಕ್ಯೂಟ್ ಹೌಸ್‌ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಿರುವರು. ಬೆಳಗ್ಗೆ 10ಕ್ಕೆ ಕಂಚಿನಡ್ಕ ಸಜಿಪನಡುವಿನಲ್ಲಿ ಸಾರ್ವಜನಿಕ ತೆರೆದ ಬಾವಿ ಉದ್ಘಾಟನೆ, ಪೂರ್ವಾಹ್ನ 11ಕ್ಕೆ ನೀರುಮಾರ್ಗ ಜಂಕ್ಷನ್‌ನಲ್ಲಿ ಜಿಪಂ ಹಾಗೂ ತಾಪಂ ಸದಸ್ಯರಿಗೆ ಸನ್ಮಾನ, ಅಪರಾಹ್ನ 3ಕ್ಕೆ ಕಟ್ಟತ್ತಿಲ ಉರೂಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಸಲಿದ್ದಾರೆ.ಸಂಜೆ 4 ಗಂಟೆಗೆ ಬೆಳ್ಮ ರೆಂಜಾಡಿ ಇಲ್ಲಿ ಕೇಂದ್ರ ಜುಮಾ ಮಸೀದಿ ಇದರ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 6ಕ್ಕೆ ಉಳ್ಳಾಲದ ಸಫರ್ ಮಂಝಿಲ್‌ನ 25ನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿರುವರು. ಮಾ. 7ರಂದು ಬೆಳಗ್ಗೆ 8:30ಕ್ಕೆ ಬೆಂದೂರ್‌ವೆಲ್ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ. ಬೆಳಗ್ಗೆ 10 ಕ್ಕೆ ತೊಕ್ಕೊಟ್ಟಿನಲ್ಲಿ ‘ದಿ ಮಂಗಳೂರು ಕ್ಯಾಥಲಿಕ್ ಕೋ-ಅಪರೇಟಿವ್ ಬ್ಯಾಂಕ್ ಉಳ್ಳಾಲ’ದ ಉದ್ಘಾಟನೆ ನಂತರ ಇತರ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಾ.8: ಟೂರಿಸ್ಟ್ ಕಾರು- ವ್ಯಾನ್ ಚಾಲಕ ಮಾಲಕರಿಂದ ಪ್ರತಿಭಟನೆ
ಮಂಗಳೂರು, ಮಾ. 5: ಪರವಾನಿಗೆ ರಹಿತ ಬಸ್ ಮತ್ತು ಖಾಸಗಿ ಕಾರುಗಳು ಪ್ರವಾಸಿ ಬಾಡಿಗೆ ಮಾಡುವುದರ ವಿರುದ್ಧ ಮಾ.8ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತೊಕ್ಕೊಟ್ಟು ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ವತಿಯಿಂದ ತೊಕ್ಕೊಟ್ಟು ಬಸ್‌ನಿಲ್ದಾಣದ ಬಳಿ ಪ್ರತಿಭಟನೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಎಂ.ದಿನೇಶ್ ಕುಂಪಲ, ಮ್ಯಾಕ್ಸಿಕ್ಯಾಬ್ ವಾಹನಕ್ಕೆ ಸಿಗುವ ಮದುವೆ, ಇನ್ನಿತರ ಪ್ರವಾಸ ಬಾಡಿಗೆಯನ್ನು ರೂಟ್ ಪರ್ಮಿಟ್ ಹೊಂದಿರುವ ಸಿಟಿ ಬಸ್ಸುಗಳು ಪಡೆಯುತ್ತಿವೆ. ಈ ಬಗ್ಗೆ ಸಂಘವು ಎಷ್ಟು ದೂರು ನೀಡಿದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಉಪವಾಸ ಹಾಗೂ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ದೇವೀಶ್ ಸರಳಾಯ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಆಳ್ವ, ಕೋಶಾಧಿಕಾರಿ ಸುಧಾಕರ್ ಉಪಸ್ಥಿತರಿದ್ದರು.
ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಹಗಲು ದರೋಡೆ: ಬಸ್ ಮಾಲಕರ ಸಂಘ ಆರೋಪ
ಕಿನ್ನಿಗೋಳಿ, ಮಾ.5: ಎನ್‌ಐಟಿಕೆ ಟೋಲ್‌ಗೇಟ್‌ನಲ್ಲಿ ಖಾಸಗಿ ಬಸ್‌ಗಳಿಗೆ ಪ್ರತೀ ಟ್ರಿಪ್‌ಗೆ 75 ರೂ. ವಿಧಿಸುವ ಮೂಲಕ ಬಸ್ ಮಾಲಕರನ್ನು ಬೆದರಿಸಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಕಿನ್ನಿಗೋಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ಮಾಲಕರು ಪ್ರತೀ ತಿಂಗಳಿಗೆ 32 ಸಾವಿರ ರೂ. ತೆರಿಗೆ ಪಾವತಿಸುತ್ತಿದ್ದಾರೆ. ತಿಂಗಳಿಗೆ 5,100 ರೂ. ಟೋಲ್ ಶುಲ್ಕ ಪಾವತಿಸಬೇಕು. ಇಲ್ಲದಿದ್ದಲ್ಲಿ ಪ್ರತೀ ಟ್ರಿಪ್‌ಗೆ ರೂ.75 ಪಾವತಿಸಬೇಕು ಎಂದು ಟೋಲ್‌ಗೇಟ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ. ಡಿಸೆಂಬರ್‌ನಲ್ಲಿ ಬಸ್ ಮಾಲಕರು ಟೋಲ್‌ಗೇಟ್ ಮಾಲಕರೊಂದಿಗೆ ಸಭೆ ನಡೆಸಿದ್ದು, ಕಂಪೆನಿ ನಷ್ಟದಲ್ಲಿದ್ದು, ನಷ್ಟ ಸರಿದೂಗುವವರೆಗೆ ಮಾತ್ರ ತಿಂಗಳಿಗೆ 5,100 ರೂ. ಪಾವತಿಸಬೇಕು. ಬಳಿಕ ಟೋಲ್ ನೀಡುವ ಆವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ್ದ ಕಾರಣ ಫೆಬ್ರವರಿ ವರೆಗೆ ಎಲ್ಲ ಮಾಲಕರು ಶುಲ್ಕ ಪಾವತಿಸಿದ್ದಾರೆ. ಆದರೆ ಇದು ಭರವಸೆಯಾಗಿಯೇ ಉಳಿದಿದೆ ಎಂದು ಆರೋಪಿಸಿದರು.
ಈ ಸಂಬಂಧ ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರು ಮಧ್ಯಸ್ಥಿಕೆ ವಹಿಸಿ ಬಸ್‌ಗಳು ಸುಸೂತ್ರವಾಗಿ ಸಾರ್ವಜನಿಕ ಸೇವೆ ನೀಡಲು ಸಹಕರಿಸಬೇಕು.ಇಲ್ಲದಿದ್ದಲ್ಲಿ ಕಿನ್ನಿಗೋಳಿ ಬಸ್ ಚಾಲಕ, ನಿರ್ವಾಹಕರ ಸಂಘ, ಸಿಟಿ ಬಸ್ ಮಾಲಕರ ಸಂಘ, ಎಕ್ಸ್‌ಪ್ರೆಸ್ ಬಸ್ ಚಾಲಕರು ಮತ್ತು ಮಾಲಕರ ಸಂಘ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಬಸ್ ಮಾಲಕರ ಸಂಘದ ಶಶಿ ಅಮೀನ್, ಜಗದೀಶ್ ಶೆಟ್ಟಿ, ಸುದೇಶ್ ಮರೋಳಿ, ಸಂದೇಶ್ ಪೈ, ಸಂತೋಷ್ ಶೆಟ್ಟಿ, ಕಿನ್ನಿಗೋಳಿ ಬಸ್ ಚಾಲಕ ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ್ ಪೂಜಾರಿ, ಗುಲಾಮ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.ಇಂದು ಧಾರ್ಮಿಕ ಪ್ರವಚನ ಉಪ್ಪಿನಂಗಡಿ, ಮಾ.5: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಉಪ್ಪಿನಂಗಡಿ ಘಟಕದ ವತಿಯಿಂದ ಇಲ್ಲಿನ ಹಳೆ ಬಸ್‌ನಿಲ್ದಾಣದಲ್ಲಿ ಮಾ.6ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ರಿಂದ ರಾತ್ರಿ 9:30ರ ತನಕ ಕಾರ್ಯಕ್ರಮ ನಡೆಯಲಿದ್ದು, ಮೌಲವಿ ಮುಹಮ್ಮದ್ ಮುಸ್ತಫಾ ದಾರಿಮಿ ‘ನೈಜ ಅಹ್ಲುಸ್ಸುನ್ನತ್ ವಲ್ ಜಮಾಅಃ’ ಹಾಗೂ ಅಹ್ಮದ್ ಅನಸ್ ಮೌಲವಿಯವರು ‘ಮುಹಿಯುದ್ದೀನ್ ಶೇಖ್‌ರ ಸಂದೇಶ ’ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.