×
Ad

ಮಹಿಳೆಯನ್ನು ಇಂದು ಭಯ ಆಳುತ್ತಿದೆ: ವೈದೇಹಿ

Update: 2016-03-05 23:22 IST

ಉಡುಪಿ, ಮಾ.5: ಮಹಿಳೆಯರು ಇಂದು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ. ತನ್ನ ಸ್ವಂತ ಮನೆಯಲ್ಲೇ ಆಕೆ ಸುರಕ್ಷಿತವಾಗುಳಿದಿಲ್ಲ.ಭಯವೇ ಇಂದು ಮಹಿಳೆಯನ್ನು ಆಳುತ್ತಿದೆ ಎಂದು ಖ್ಯಾತ ಸಾಹಿತಿ ವೈದೇಹಿ ಹೇಳಿದ್ದಾರೆ.ಜಿಲ್ಲಾ ಲೇಖಕಿಯರ ಸಂಘ, ಕರ್ನಾಟಕ ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ನಗರದ ಹೊಟೇಲ್ ಕಿದಿಯೂರಿನ ಮಹಾಜನ ಸಭಾಂಗಣದಲ್ಲಿ ಆಯೋಜಿಸಿದ ಮಹಿಳಾ ವಿಚಾರಗೋಷ್ಠಿ ಹಾಗೂ ಹಾಸ್ಯ ಬರಹಗಾರ ಪಡುಕೋಣೆ ರಮಾನಂದ ರಾಯರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಮನೆಯಿಂದ ಹೊರಹೋದ ಮಹಿಳೆಯರು ಸುರಕ್ಷಿತವಾಗಿ ಮರಳುವುದೇ ದೊಡ್ಡ ಸುದ್ದಿಯಾಗುವಂತಾಗಿದೆ. ಸಮಾಜ ಯಾಕೆ ಮಹಿಳೆಯರಲ್ಲಿ ಇಷ್ಟೊಂದು ಭಯವನ್ನು ಹುಟ್ಟುಹಾಕುತ್ತಿದೆ. ನಿರ್ಭಯತೆಯಿಂದ ಬದುಕಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ನಮ್ಮ ಗಂಡು ಮಕ್ಕಳನ್ನು ಹೊಸ ರೀತಿಯಲ್ಲಿ, ಎಲ್ಲರೂ ಸಮಾನರು ಎಂಬ ರೀತಿಯಲ್ಲಿ ನೋಡುವಂತೆ ಪ್ರೇರೇಪಿಸಬೇಕಾಗಿದೆ ಎಂದರು. ಪಡುಕೋಣೆ ರಮಾನಂದ ರಾಯರಂಥ ಮಹಾನ್ ಹಾಸ್ಯ ಲೇಖಕರನ್ನು ಕನ್ನಡಿಗರು ಮರೆತೇ ಬಿಡುತ್ತಿದ್ದಾರೆ. ಕರಾವಳಿಯವರೇ ಆದ ಪಂಜೆಯವರು, ಪಡುಕೋಣೆ ನಮ್ಮ ವಿಸ್ಮರಣೆಗೆ ಸರಿಯುತ್ತಿದ್ದಾರೆ. ಅವರನ್ನು ಮತ್ತೆ ನೆನಪಿಸುವ ಕೆಲಸವನ್ನು ಅಕಾಡಮಿ ಮಾಡಬೇಕಾಗಿದೆ ಎಂದು ವೈದೇಹಿ ನುಡಿದರು.ಇಂದಿನ ಹೆಣ್ಣು ಮಕ್ಕಳ ಮನದಾಳದ ಭಯವನ್ನು ಪ್ರತಿನಿಧಿಸುವ ‘ಒಬ್ಬಳೇ ಹೊರಟಿರುವೆ ಎಲ್ಲಿಗೆ’ ಎಂಬ ಕವನವನ್ನು ವೈದೇಹಿ ವಾಚಿಸಿದರು.ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆ, ಹಾಸ್ಯ ಬರಹಗಾರ ಪಡುಕೋಣೆ ರಮಾನಂದ ರಾಯರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ.ನಿಕೇತನಾ ಉಪಸ್ಥಿತರಿದ್ದರು. ಸಂಗೀತ ಜಾನ್ಸನ್ ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಮೇಟಿ ಮುದಿಯಪ್ಪ ಆಶಯ ಭಾಷಣ ಮಾಡಿದರು. ಪ್ರಾಧ್ಯಾಪಕಿ ಸ್ವಾತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News