ಕಲಾವಿದ ವಿಶ್ವಮಾನವನಾಗಲಿ: ಮೂರ್ತಿ
ಉಡುಪಿ, ಮಾ.5: ಕಲಾವಿದರಿಗೆ ಸ್ವಾಭಿಮಾನ, ಘನತೆ, ಗೌರವ ಮುಖ್ಯ. ಜಾತಿ, ಧರ್ಮ, ಗಡಿಯನ್ನು ಮೀರಿದ ಘನತೆ ಕಲಾವಿದರಿಗೆ ಇರಬೇಕು. ಸೃಜನಶೀಲ ವ್ಯಕ್ತಿ ಇವುಗಳನ್ನೆಲ್ಲ ಮೀರಿ ವಿಶ್ವಮಾನವನಾಗುತ್ತಾನೆ ಎಂದು ಕರ್ನಾಟಕ ಲಲಿತ ಕಲಾ ಅಕಾಡಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದ್ದಾರೆ.
ಉಡುಪಿಯ ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಿದಿಯೂರು ಸ್ಕೂಲ್ ಆಫ್ ಆರ್ಟ್ಸ್‌ನ ಸಹಯೋಗದೊಂದಿಗೆ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಶನಿವಾರ ನಡೆದ ಎರಡು ದಿನಗಳ ‘ವರ್ಣೋದಯ’ ರಾಜ್ಯಮಟ್ಟದ ಚಿತ್ರಕಲಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವರ್ಣೋದಯ’ವನ್ನು ಉದ್ಯಮಿ ಡಾ.ಜಿ.ಶಂಕರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಪ್ರವರ್ತಕ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ಪೀಟರ್ ಲೂಯಿಸ್, ಉಡುಪಿ ಚಿತ್ರಕಲಾ ಮಂದಿರದ ಕಾರ್ಯದರ್ಶಿ ಡಾ.ನಿರಂಜನ್ ಯು.ಸಿ., ಲೆಕ್ಕ ಪರಿಶೋಧಕ ಗಣೇಶ್ ಕಾಂಚನ್ ಉಪಸ್ಥಿತರಿದ್ದರು.
ಚಿತ್ರಕಲಾ ಶಿಬಿರದ ಸಂಚಾಲಕ ರಮೇಶ್ ಕಿದಿಯೂರು ಸ್ವಾಗತಿಸಿದರು. ಕೊಡಂಕೂರು ದೇವರಾಜಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಒಟ್ಟು 13 ಪ್ರಸಿದ್ಧ ಚಿತ್ರ ಕಲಾವಿದರು ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದರು.