ವೃತ್ತಿಪರ ಶಿಕ್ಷಣ ಪರೀಕ್ಷೆಗಳಿಗೆ ಬ್ಯಾರಿ ಭಾಷಿಗರಿಗೆ ವಿಶೇಷ ಮಾನ್ಯತೆ: ಸಚಿವ ರೈಯಿಂದ ಸಿಎಂಗೆ ಪತ್ರ
ಮಂಗಳೂರು ಮಾ.5: ಬ್ಯಾರಿ ಮಾತೃಭಾಷಿಗರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ವೃತ್ತಿಪರ ಶಿಕ್ಷಣ ಮತ್ತು ಇತರ ವಿಷಯಗಳ ಪ್ರವೇಶ ಪರೀಕ್ಷೆಗಳಿಗೆ ಹೊರನಾಡ ಕನ್ನಡಿಗ ಮತ್ತು ಗಡಿನಾಡ ಕನ್ನಡಿಗರೆಂದು ಪರಿಗಣಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರದ ಮೂಲಕ ಕೋರಿಕೆ ಸಲ್ಲಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ವೃತ್ತಿಪರ ಶಿಕ್ಷಣ ಮತ್ತು ಇತರ ವಿಷಯಗಳಿಗೆ ನಡೆಸುವ ಪ್ರವೇಶ ಪರೀಕ್ಷೆಗಳ ಸಂದರ್ಭ ತುಳು ಮತ್ತು ಕೊಡವ ಮಾತೃಭಾಷೆಯನ್ನಾಡುವ ಜನರನ್ನು ಹೊರನಾಡ ಕನ್ನಡಿಗ ಮತ್ತು ಗಡಿನಾಡ ಕನ್ನಡಿಗರೆಂದು ಪರಿಗಣಿಸಲಾಗುತ್ತದೆ. ಆದರೆ ಕನ್ನಡದ ಇನ್ನೊಂದು ಉಪ ಭಾಷೆಯಾಗಿರುವ ಬ್ಯಾರಿ ಭಾಷಿಗರನ್ನು ಈ ರೀತಿ ಪರಿಗಣಿಸಲಾಗಿಲ್ಲ. ಬ್ಯಾರಿ ಕರ್ನಾಟಕದ ಗಡಿಭಾಗದಲ್ಲಿ ಮತ್ತು ಕರ್ನಾಟಕದಲ್ಲಿ ಮಾತ್ರ ಆಡುವ ಭಾಷೆಯಾಗಿದೆ. ಈ ಭಾಷೆಯ ಅಭಿವೃದ್ಧಿಗೆ ಸರಕಾರ ಸಾಹಿತ್ಯ ಅಕಾಡಮಿಯನ್ನೂ ಸ್ಥಾಪಿಸಿದೆ. ಆದುದರಿಂದ ತುಳು ಮತ್ತು ಕೊಡವ ಭಾಷೆಗೆ ಅನುಸರಿಸಿರುವ ಮಾನದಂಡವನ್ನು ಅನುಸರಿಸಿ ಬ್ಯಾರಿ ಮಾತೃ ಭಾಷೆಯನ್ನಾಡುವ ಜನರನ್ನು ಹೊರನಾಡ ಕನ್ನಡಿಗ ಮತ್ತು ಗಡಿನಾಡ ಕನ್ನಡಿಗರೆಂದು ಪರಿಗಣಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸಚಿವರು ಪತ್ರದ ಮೂಲಕ ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.