ಪ್ರಶಸ್ತಿ ವಾಪಸಾತಿಯಿಂದ ಕೊಟ್ಟವರಿಗೆ ಅವಮಾನ: ಏರ್ಯ
ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ
ಉಡುಪಿ, ಮಾ.5: ದೇಶದಲ್ಲಿ ಅಸಹಿಷ್ಣುತೆಯ ಕಾರಣದ ಮೇಲೆ ತಮಗೆ ನೀಡಲಾದ ಪ್ರಶಸ್ತಿ ವಾಪಸ್ ನೀಡುವುದು, ಕೊಟ್ಟವರಿಗೆ ಹಾಗೂ ಪ್ರಶಸ್ತಿಗೆ ಮಾಡುವ ಅವಮಾನ ಎಂದು ಹಿರಿಯ ಸಾಹಿತಿ ಹಾಗೂ ತುಳು ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರಿನ ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿ, ಎಂಜಿಎಂ ಕಾಲೇಜು ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಡಿಕೇರಿಯ ಖ್ಯಾತ ಗಮಕಿ ಜಯರಾಮ ರಾವ್ ಅವರಿಗೆ 17ನೆ ವರ್ಷದ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತೀ ವರ್ಷ ಮುಳಿಯ ತಿಮ್ಮಪ್ಪಯ್ಯ ಸ್ಮರಣಾರ್ಥ ಪ್ರಶಸ್ತಿಯನ್ನು ಮಂಗಳೂರಿನ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಟ್ರಸ್ಟ್ ಮಂಗಳೂರಿನಲ್ಲಿ ಆಯೋಜಿಸುತ್ತಿದ್ದು, ಪ್ರಸ್ತುತ ವರ್ಷದಿಂದ ಪ್ರಶಸ್ತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಜಯರಾಮ ರಾವ್ ಮಾತನಾಡಿದರು.
ಹಿರಿಯ ಲೇಖಕ, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ರಾಮಚಂದ್ರ ಮುಳಿಯ ತಿಮ್ಮಪ್ಪಯ್ಯರ ಸಂಸ್ಮರಣೆ ಮಾಡಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಕೋಡಿಜಾಲ್ ಗೋವಿಂದ ಭಟ್, ಮನೋರಮಾ ಎಂ.ಭಟ್ ಉಪಸ್ಥಿತರಿದ್ದರು.
ಡಾ.ನಾ.ದಾಮೋದರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮುಳಿಯರ ಪುತ್ರ ಮುಳಿಯ ರಾಘವಯ್ಯ ಪ್ರಶಸ್ತಿ ವಿಜೇತರನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನೋರಮಾ ಭಟ್ ವಂದಿಸಿದರು. ಪ್ರೊ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.