ಮಾಂಸಖಂಡ, ಗಂಟುಗಳಲ್ಲಿ ನೋವು
ಕೇಪ್ ಕ್ಯಾನವರಲ್, ಮಾ. 5: ದಾಖಲೆಯ ಬಾಹ್ಯಾಕಾಶ ವಾಸ್ತವ್ಯವನ್ನು ಮುಗಿಸಿ ಭೂಮಿಗೆ ವಾಪಸ್ ಬಂದಾಗ ತನ್ನ ಮಾಂಸಖಂಡಗಳು ನೋಯುತ್ತಿದ್ದವು, ಗಂಟುಗಳಲ್ಲಿ ನೋವಿತ್ತು, ಚರ್ಮ ಅತಿ ಸೂಕ್ಷ್ಮವಾಗಿತ್ತು ಹಾಗೂ ತಾನು ಒಂದು ವರ್ಷಕ್ಕೂ ಅಧಿಕ ಸಮಯ ಹೊರಗಿದ್ದೆ ಎಂಬ ಭಾವನೆಯಿತ್ತು ಎಂದು ಅಮೆ ರಿಕದ ವ್ಯೋಮಯಾನಿ ಸ್ಕಾಟ್ ಕೆಲಿ ಶುಕ್ರವಾರ ಹೇಳಿದ್ದಾರೆ.
‘‘ನಾನು ಅಲ್ಲಿ (ಬಾಹ್ಯಾ ಕಾಶದಲ್ಲಿ) ಯುಗ ಯುಗಗಳಿಂದಲೂ ವಾಸವಾಗಿದ್ದೇನೇನೋ ಅನಿಸುತ್ತಿತ್ತು’’ ಎಂದು ಹ್ಯೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಕೆಲಿ ಹೇಳಿದರು.
ಕೆಲಿ ತನ್ನ ರಶ್ಯದ ಸಹೋದ್ಯೋಗಿ ಮಿಖೈಲ್ ಕೋರಿಯೆಂಕೊ ಜೊತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 340 ದಿನಗಳನ್ನು ಕಳೆದು ಬುಧವಾರ ವಾಪಸಾಗಿದ್ದಾರೆ.
ಸಾಮಾನ್ಯವಾಗಿ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆಯುವು ದಕ್ಕಿಂತ ದುಪ್ಪಟ್ಟು ಸಮಯವನ್ನು ಈ ಗಗನಯಾನಿಗಳು ಕಳೆದಿದ್ದಾರೆ.
ಮಂಗಳ ಗ್ರಹ ಹಾಗೂ ಅದಕ್ಕೂ ದೂರದ ಆಕಾಶಕಾಯ ಗಳಿಗೆ ಯಾನ ಕೈಗೊಳ್ಳುವುದಕ್ಕೆ ಯೋಜನೆಯನ್ನು ಸಿದ್ಧಪಡಿಸುವ ಕಾರ್ಯಕ್ರಮದ ಭಾಗವಾಗಿ ಈ ಪ್ರಯೋಗ ನಡೆದಿದೆ. ಮಂಗಳನಲ್ಲಿಗೆ ಹೋಗಿ ಬರಲು ಎರಡು ವರ್ಷಗಳಿಗೂ ಅಧಿಕ ಸಮಯ ಬೇಕಾಗುತ್ತದೆ.
ಕಝಕ್‌ಸ್ತಾನ್‌ನಲ್ಲಿ ಬುಧವಾರ ಭೂಸ್ಪರ್ಶ ಮಾಡಿದ ಬಳಿಕ ಆರಂಭದಲ್ಲಿ ಚೆನ್ನಾಗಿಯೇ ಇದ್ದೆ, ಆದರೆ ಬಳಿಕ ಬಳಲಿಕೆ ಮತ್ತು ಮಾಂಸಖಂಡದ ನೋವು ಕಾಡಿತು ಎಂದು ಈ ಹಿಂದೆ ಮೂರು ಬಾರಿ ಬಾಹ್ಯಾಕಾಶ ಯಾನ ಕೈಗೊಂಡಿರುವ ಕೆಲಿ ತಿಳಿಸಿದರು.
‘‘ಮಾಂಸಖಂಡದ ನೋವು ಮತ್ತು ಗಂಟು ನೋವಿಗೆ ಸಂಬಂಧಿಸಿದಂತೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನನ್ನ ದೈಹಿಕ ಅನುಭವ ಬೇರೆಯೇ ಆಗಿತ್ತು. ಅದೊಂದು ರೀತಿಯಲ್ಲಿ ಅನಿರೀಕ್ಷಿತವಾಗಿತ್ತು’’ ಎಂದು 52 ವರ್ಷದ ಗಗನಯಾನಿ ಹೇಳಿದರು.