ಕನ್ಹಯ್ಯಾರನ್ನು ಮತ್ತೆ ಹೊಗಳಿದ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ
ಪಾಟ್ನ: ಕಾರಾಗೃಹದಿಂದ ಬಿಡುಗಡೆಗೊಂಡಿರುವ ಜೆನ್‌ಯು ವಿದ್ಯಾರ್ಥಿ ಒಕ್ಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಜೆಎನ್‌ಯುವಿನಲ್ಲಿ ಮಧ್ಯರಾತ್ರಿ ಮಾಡಿದ ಭಾಷಣವನ್ನು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಇಂದು ಬೆಂಬಲಿಸಿ ಪ್ರಶಂಸಿದ್ದಾರೆ.
ಜೆಎನ್‌ಯುವಿನಲ್ಲಿ ಸಂಸತ್ ದಾಳಿ ರೂವಾರಿ ಅಪ್ಝಲ್‌ಗುರು ಪರ ಕಾರ್ಯಕ್ರಮ ಆಯೋಜನೆ ಮಾಡಿದ ದೇಶದ್ರೋಹ ಆರೋಪದಲ್ಲಿ ಬಂಧನಗೊಳಗಾದ ಕನ್ಹಯ್ಯೋ ಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ನಂತರ ಜೆಎನ್‌ಯುನಲ್ಲಿ ಬಿಹಾರದ ಪುತ್ರ ಮಾಡಿದ ಭಾಷಣ ಒಳ್ಳೆಯ ಮತ್ತು ಚಿಂತನೆಯನ್ನು ಪ್ರಚೋದಿಸುವ ಭಾಷಣವೆಂದು ಶತ್ರುಘ್ನ ಸಿನ್ಹಾ ಬಣ್ಣಿಸಿದ್ದಾರೆ.
ಬಿಹಾರದ ಗ್ರಾಮೀಣ ಭಾಗದ ಬಡ ಕುಟುಂಬ ಹಿನ್ನೆಲೆಯಿಂದ ಬಂದರೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಸಿನ್ಹಾ ಹೇಳಿದರು.
ದಿಲ್ಲಿ ಹೈಕೋರ್ಟ್ ಕನ್ಹಯ್ಯರವರಿಗೆ ಮಧ್ಯಾಂತರ ಜಾಮೀನು ಮಂಜೂರು ಮಾಡಿದರಿಂದ ಸಂತಸಗೊಂಡ ಸಿನ್ಹಾ, ಯಾರು ಆತ (ಕನ್ಹಯ್ಯಾ)ತಪ್ಪು ಮಾಡಿದ್ದಾರೆಂದು ಭಾವಿಸಿದ್ದಾರೋ ಅವರಿಂದಲೇ ಆತ ಬೆಂಬಲವನ್ನು ಸ್ವೀಕರಿಸಲಿದ್ದಾರೆ ಎಂಬ ಆಶಾವಾದವಿದೆ. ಅವರು ಸ್ವತಃ ಯೋಗ್ಯ ವ್ಯಕ್ತಿಯೆಂದು ಸಾಬೀತುಪಡಿಸುತ್ತಾನೆಂಬ ವಿಶ್ವಾಸ ನನಗಿದೆ ನಾನು ಹಾರೈಸುತ್ತೇನೆ ಎಂದು ಅವರು ತಿಳಿಸಿದರು.
ಸಂವಿಧಾನ ಒದಗಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಬಡತನ,ಜಾತೀಯತೆ ಹಾಗೂ ಹಸಿವಿನಿಂದ ಸ್ವಾತಂತ್ರ ದೊರಕಬೇಕು ಎಂಬ ಕನ್ಹಯ್ಯಾ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ ಎಂದು ಶತ್ರುಘ್ನ ಸಿನ್ಹಾ ಸಮರ್ಥಿಸಿಕೊಂಡಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ರಾಷ್ಟ್ರದ ಹಲವಾರು ನಾಯಕರು ಕನ್ಹಯ್ಯಿರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಕೇಳಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ.