×
Ad

ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದ ಬಜರಂಗದಳ ಮುಖಂಡನ ವಿರುದ್ಧ ದೂರು

Update: 2016-03-06 15:24 IST

ಕಾರ್ಕಳ, ಮಾ.6:  ಮಾಧ್ಯಮದ ಪ್ರತಿನಿಧಿಗಳ ಜತೆ ಅನುಚಿತವಾಗಿ ವರ್ತಿಸಿದ ಬಜರಂಗದಳದ ನಗರ ಸಂಚಾಲಕ ಅನಿಲ್ ಪ್ರಭು ವಿರುದ್ದ ಕಾರ್ಕಳ ಎಎಸ್‌ಪಿ ಗರಂಗೊಂಡ ಘಟನೆ ಶುಕ್ರವಾರ ನಡೆದಿದೆ.

ಪುರಸಭೆ ವ್ಯಾಪ್ತಿಯ ವೆಂಕಟ್ರಮಣ ದೇವಳದ ಬಳಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ  ಬಹುಮಹಡಿ ಕಟ್ಟಡಕ್ಕೆ ಪುರಸಭೆ ಅಧಿಕಾರಿಗಳು ಇಲ್ಲದ ಸಂದರ್ಭ ಚರಂಡಿ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿದ್ದು, ಅಕ್ರಮ ಚಟುವಟಿಕೆಯನ್ನು ತಡೆಯಲು ಮುಂದಾದ ಮಾಧ್ಯಮದ ಪ್ರತಿನಿಧಿಗಳನ್ನು ತಡೆಯಲು ಬಿಜರಂಗದಳದ ನಗರ ಸಂಚಾಲಕ ಹಾಗೂ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವ ಅನಿಲ್ ಪ್ರಭು ಧಾವಿಸಿ ಬಂದದ್ದಲ್ಲದೆ, ನಿಮ್ಮ ಸೊಂಟ ಮುರಿಯುವುದಾಗಿ ಬೆದರಿಕೆಯೊಡ್ಡಿದ್ದರು.

ತಕ್ಷಣ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ದೂರು ನೀಡಲಾಗಿತ್ತು.

ವಿಚಾರಣೆ : ಕಾರ್ಕಳ ಎಎಸ್‌ಪಿ ಡಾ. ಸುಮನ ಆರೋಪಿ ಅನಿಲ್ ಪ್ರಭು ಮತ್ತು ಮಾಧ್ಯಮದ ಪ್ರತಿನಿಧಿಗಳನ್ನು ಅದೇ ದಿನ ರಾತ್ರಿ ಠಾಣೆಗೆ ಕರೆಸಿದ್ದರು. ಈ ಸಂದರ್ಭ ಅನಿಲ್ ಪ್ರಭು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಎನ್ನಲಾಗಿದ್ದು, ಇಲ್ಲಿನ ಕಾಲೇಜೊಂದರ ಸುಮಾರು 20  ಹಾಸ್ಟೇಲ್ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದಿದ್ದ. ಸಿಟ್ಟಿಗೆದ್ದ ಎಎಸ್‌ಪಿ, ಆ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಂಡು, ಕ್ಷಮಾಪಣಾ ಪತ್ರಕ್ಕೆ ಸಹಿ ಬರೆಸಿಕೊಂಡಿದ್ದಾರೆ.

 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ, ರಾತ್ರಿ ಹಾಸ್ಟೇಲ್‌ನಲ್ಲಿ ಕುಳಿತುಕೊಂಡು ಸಮಾಜ ಬಾಹಿರ ಕೃತ್ಯದಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ  ಅಸಮಾಧಾನ ವ್ಯಕ್ತಪಡಿಸಿದೆ.

ಕ್ಷಮಾಪಣೆ : ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ಅನಿಲ್ ಪ್ರಭು, ಮುಂದಿನ ದಿನಗಳಲ್ಲಿ ಮಾಧ್ಯಮದ ಜತೆ ಅನುಚಿತವಾಗಿ ವರ್ತಿಸಲಾರೆ ಎಂದು ಕ್ಷಮಾಚಿಸಿದ್ದಾನೆ.

ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ಮಾಧ್ಯಮದ ಪ್ರತಿನಿಧಿಗಳು ಪ್ರಕರಣವನ್ನು ವಾಪಾಸ್ ಪಡೆದುಕೊಂಡಿದ್ದಾರೆ. ದೂರದ ಊರುಗಳಿಂದ ವಿದ್ಯಾಭ್ಯಾಸಕ್ಕೆ ಬಂದ ವಿದ್ಯಾರ್ಥಿಗಳು ಈ ಸಮಾಜಬಾಹಿರ ಕೃತ್ಯದಲ್ಲಿ ಭಾಗಿಯಾಗಿ, ಮುಂದೆ ಠಾಣೆ ಅಲೆದಾಟ ನಡೆಸಬಾರದು ಎನ್ನುವ ಹಿತಾದೃಷ್ಟಿಯಿಂದ ಮಧ್ಯಮದ ಪ್ರತಿನಿಧಿಗಳು ಈ ನಿರ್ಧಾರಕ್ಕೆ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News