ಕಿನ್ನಿಗೋಳಿ: ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ 2016
ಕಿನ್ನಿಗೋಳಿ, ಮಾ.6: ತುಳುವರೆಲ್ಲರನ್ನು ಒಗ್ಗೂಡಿಸಿ, ಬಡವರ ಬೆನ್ನೆಲುಬಾಗಿ ಎಲ್ಲ ಸಂಘ ಸಂಸ್ಥೆಗಳಿಗೂ ಆದರ್ಶಪ್ರಾಯವಾಗಿ ವಿನಾಯಕ ಮಿತ್ರಮಂಡಳಿ ತೆಲಿಕೆ ನಲಿಕೆದ ಉಚ್ಚಯ ಮಿತ್ರೋತ್ಸವ 2016 ಆಯೋಜಿಸಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಪುನರೂರಿನ ಪಟೇಲ್ ವಾಸುದೇವ ರಾವ್ ಹೇಳಿದರು.
– ಆದಿತ್ಯವಾರ ಕೆಮ್ರಾಲ್ ಗ್ರಾಮ ಪಂಚಾಯತ್ ವಠಾರದಲ್ಲಿ ಸರ್ವಜನಿಕ ಗಣೇಶೋತ್ಸವ ಸಮಿತಿ ಆಸ್ರಯದಲ್ಲಿ ಶ್ರೀವಿನಾಯಕ ಮಿತ್ರ ಮಂಡಳಿ ಆಯೋಜಿಸಲಾಗಿದ್ದ ಮಿತ್ರೋತ್ಸವ 2016 ಕಾರ್ಯಕ್ರಮವನ್ನು ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಘ ಸಂಸ್ಥೆಗಳು ತಮ್ಮ ಊರಿನ ಒಳಿತಿಗೆ ದುಡಿಯುವ ಜೊತೆಗೆ ಬಡವರು, ಅಶ್ಯಕ್ತರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡುವಂತಾಗಬೇಕು. ಎಲ್ಲಾ ರಂಗಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಮತ್ತು ಅವರ ಏಳಿಗೆಗೆ ಶ್ರಮಿಸುವಂತಾಗ ಬೇಕು ಎಂದರು.
ಬಳಿಕ ಕಾರ್ಯಕ್ರಮವನ್ನು ತುಳುನಾಡ ಸಾಂಪ್ರದಾಯಿಕ ಚೆನ್ನಮಣೆ ಆಟ ಆಡುವ ಮೂಲಕ ತುಳುನಾಡಿನ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್ ವಹಿಸಿದ್ದರು. ವೇ.ಮೂ. ವಾಸುದೇವ ಭಟ್ ಪಂಜ ಆಶೀರ್ವಚನ ಗೈದರು.
ತುಳುನಾಡ ಆಟೋಟ ಸ್ಪರ್ಧೆಗಳ ಬಗ್ಗೆ ಕೆ.ಕೆ. ಪೇಜಾವರ ಮಾಹಿತಿ ನೀಡಿದರು. ಮುಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು, ಉದ್ಯಮಿ ದೇವದಾಸ್, ಮಾತೃ ಸಂಸ್ಥೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸೇಸಪ್ಪ ಸಾಲ್ಯಾನ್, ಸಿವಿಲ್ ಕಂಟ್ರಾಕ್ಟರ್ ಕೊರಗಪ್ಪ ಮೇಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.