ಪರಸ್ಪರ ಅರಿತುಕೊಂಡು ಬಾಳಿದರೆ ಮಾತ್ರ ಸಮಾಜದಲ್ಲಿ ಶಾಂತಿ - ಆನಾಜೆ ಗಣೇಶ್ ರೈ
ಪುತ್ತೂರು: ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಕಲಿಸಿಲ್ಲ ಆದರೆ ಧರ್ಮವನ್ನು ಅನುಸರಿಸುವ ಅನುಯಾಯಿಗಳು ಮಾತ್ರ ಹಿಂಸೆಯಲ್ಲಿ ತೊಡಗಿದ್ದು ಇದು ಅರಿವಿನ ಕೊರತೆಯ ಕಾರಣದಿಂದಾಗಿದೆ. ಪ್ರತೀಯೊಬ್ಬರೂ ಪರಸ್ಪರ ಅರಿತು ತಿಳುವಳಿಕೆಯುಳ್ಳವರಾದರೆ ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಆನಾಜೆ ಗಣೇಶ್ ರೈ ಹೇಳಿದರು.
ಅವರು ಶನಿವಾರ ರಾತ್ರಿ ನಡೆದ ಇರ್ದೆ- ಪಳ್ಳಿತ್ತಡ್ಕ 40 ಅನೇ ಉರೂಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಎಲ್ಲಾ ಧರ್ಮಗಳ ಮೂಲ ಸಿದ್ದಾಂತ ಒಂದೇ ಆಗಿದೆ ಆದರೆ ವಿವಿಧ ಧರ್ಮಿಯರ ನಡುವೆ ವ್ಯರ್ಥ ವಿಚಾರಕ್ಕೂ ಹಿಂಸೆ ಉಂಟಾಗುತ್ತಿದೆ ಇದರಿಂದ ಸಮಾಜಕ್ಕೆ ಎಂದೂ ಒಳಿತಾಗುವುದಿಲ್ಲ. ನಮ್ಮ ಮನಸ್ಸು ಶುದ್ದವಾಗಿರಬೇಕು . ಇತರರು ತನ್ನಂತೆ ಎಂಬ ಭಾವನೆ ನಮ್ಮಲ್ಲಿದ್ದರೆ ಮಾತ್ರ ನಾವು ಮನುಷ್ಯರಾಗಲು ಸಾಧ್ಯ ಎಂದರು. ಎಂದು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ ಮಾತನಾಡಿ ನಮ್ಮಲ್ಲಿ ಅಹಂಕಾರ ಇರಬಾರದು. ನಾನು ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಹಂಕಾರ ಇರುವವನು ಶ್ರೇಷ್ಟ ವ್ಯಕ್ತಿಯಾಗಲು ಸಾಧ್ಯವಿಲ್ಲ. ಎಲ್ಲಾ ಧರ್ಮಿಯರು ಪರಸ್ಪರ ಸೌಹಾರ್ಧತೆಯಿಂದ ಜೀವನ ನಡೆಸಬೇಕು. ತನ್ನ ಧರ್ಮವನ್ನು ಅರಿತುಕೊಂಡು ಇತರೆ ಧರ್ಮವನ್ನು ತಿಳಿದುಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು. ತನ್ನ ಧರ್ಮ ಮಾತ್ರ ಶ್ರೇಷ್ಟ ಎಮಬ ಭಾವನೆಯನ್ನು ಪ್ರತೀಯೊಬ್ಬರೂ ಬಿಟ್ಟು ಬಿಡುವಂತಾಗಬೇಕು ಆಗಿದ್ದಲ್ಲಿ ಮಾತ್ರ ನಮಗೆ ಎಲ್ಲರೊಂದಿಗೂ ಸ್ನೇಹದಿಂದ ಇರಲು ಸಾಧ್ಯವಾಗುತ್ತದೆ. ಸ್ವಧರ್ಮವನ್ನು ಪಾಲನೆ ಮಾಡುವುದರ ಜೊತೆಗೆ ಅನ್ಯ ಧರ್ಮವನ್ನು, ಧರ್ಮಿಯರನ್ನು ಗೌರವದಿಂದ ಕಾಣುವ ಮನೋವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಸನ್ಮಾನ
ಈ ಸಂದರ್ಭದಲ್ಲಿ ಇರ್ದೆ - ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ ಸ್ಥಳದಾನಿ ಆನಾಜೆ ಗಣೇಶ್ ರೈ ಅವರನ್ನು ಕೊರಿಂಗಿಲ ಜಮಾತ್ ಕಮಿಟಿ ಹಾಗೂ ಉರೂಸ್ ಕಮಿಟಿ ಪರವಾಗಿ ಸನ್ಮಾನಿಸಲಾಯಿತು.
ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಫಝಲ್ ರಹೀಂ ಉದ್ಘಾಟಿಸಿದರು. ಸಯ್ಯದ್ ಹಾಶಿಂ ಬಾಅಲವಿ ತಂಙಳ್ ದುವಾ ನೆರವೇರಿಸಿದರು. ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್. ಬಿ ಮುಹಮ್ಮದ್ ದಾರಿಮಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕೊರಿಂಗಿಲ ಮಸೀದಿ ಇಮಾಂ ಅಯ್ಯೂಬ್ ವಹಬಿ, ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕ್ಯಕಾರ, ಗ್ರಾಪಂ ಸದಸ್ಯ ರಕ್ಷಣ್ ರೈ ಆನಾಜೆ, ಮಹಮ್ಮದ್ ಕುಂಞಿ ಕುಕ್ಕುವಳ್ಳಿ ಕೆಎಸ್‌ಎ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ಮೊಯಿದು ಕುಂಞಿ ಕೋನಡ್ಕ, ಅಬ್ದುಲ್ ರಹಿಮಾನ್ ಆಝಾದ್ ಪುತ್ತೂರು, ಅಬ್ಬಾಸ್ ಉಪಸ್ಥಿತರಿದ್ದರು.
ಉರೂಸ್ ಸಮಾರೋಪ ಸಮಾರಂಭ
ತ್ವಾಹಾ ಬಾಫಕಿ ತಂಙಳ್ ಕುಂಬೋಲ್ ಇವರ ಅಧ್ಯಕ್ಷತೆಯಲ್ಲಿ ಉರೂಸ್ ಸಮಾರೋಪ ಸಮಾರಂಭ ನಡೆಯಿತು. ಶಾಕಿರ್ ದಾರಿಮಿ ಕೊಲ್ಲಂ ರವರು ಅಲ್ಲಾಹು ಸ್ನೇಹಿಚ್ಚ ಅಡಿಮ ಎಂಬ ವಿಷಯದಲ್ಲಿ ಮುಖ್ಯ ಧಾರ್ಮಿಕ ಪ್ರವಚನ ನೀಡಿದರು. ಸಯ್ಯದ್ ಮಹಮ್ಮದ್ ಸವಾದ್ ತಂಙಳ್ ಕೋಝಿಕ್ಕೋಡು, ಕೆ. ಎಂ ಯೂಸುಫ್ ಹಾಜಿ ಕೊರಿಂಗಿಲ, ಟಿ. ಎ ರಹಿಮಾನ್ ಶಹನಾ ಟಿಂಬರ್, ಉರೂಸ್ ಕಮಿಟಿ ಅಧ್ಯಕ್ಷ ಅಶ್ರಫ್ ಕುಕ್ಕುಪುಣಿ , ಕೊರಿಂಗಿಲ ಜಮಾತ್ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ ಉಪಸ್ಥಿತರಿದ್ದರು.
ಸಮರೋಪದ ಬಳಿಕ ಅನ್ನದಾನ ನಡೆಯಿತು. ಉರೂಸ್ ಪ್ರಯುಕ್ತ 7 ದಿನಗಳ ಕಾಲ ಸಾವಿರಾರು ಮಂದಿ ಭಕ್ತರು ಬೆಲ್ಲದ ಗಂಜಿ ಸೀರಣಿ ಸ್ವೀಕರಿಸಿದರು.
ಅಬ್ದುಲ್ಲ ಮೌಲವಿ ಬೇಂಗತ್ತಡ್ಕ ಸ್ವಾಗತಿಸಿ, ಆಸಿಫ್ ತಂಬುತ್ತಡ್ಕ ವಂದಿಸಿದರು. ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.