ಕೊಣಾಜೆ: ತಲವಾರಿನಿಂದ ಹಲ್ಲೆ ನಡೆಸಿದ ಆರೋಪಿ ಬಂಧನ
ಕೊಣಾಜೆ: ಮುಡಿಪು ಪೇಟೆಯಲ್ಲಿ ವ್ಯಕ್ತಿಯೊರ್ವರಿಗೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡದ ಪ್ರಮುಖ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಡಿಪು ಗೌಸಿಯಾ ಕಂಪೌಂಡ್‌ನ ಅಬ್ದುಲ್ ಖಾದರ್ ಎಂಬವರ ಪುತ್ರ ನವಾರ್(28) ಎಂದು ಗುರುತಿಸಲಾಗಿದೆ. ಪೆ.23ರಂದು ಮುಡಿಪು ಪೇಟೆಯಲ್ಲಿ ಅರಫಾ ಹಾರ್ಡ್‌ವೇರ್ ಅಂಗಡಿಯ ಮಾಲಕರಾದ ಮಹಮ್ಮದ್ ಹನೀಫ್ ಎಂಬವರಿಗೆ ನವಾರ್ ಮತ್ತು ಆತನ ಸಹಚರರು ಸೇರಿ ತಲವಾರಿನಿಂದ ಕಡಿದು ಹಲ್ಲೆ ನಡೆಸಿತ್ತು ಎಂದು ಆರೋಪಿಸಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ನವಾರ್ನನ್ನು ಶನಿವಾರದಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವಾರ್ ಈ ಹಿಂದೆಯೂ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಯಾಗಿದ್ದು, ಈತನ ವಿರುದ್ದ ಮುಡಿಪುವಿನಲ್ಲಿ ಗಲಭೆ ಪ್ರಕರಣ, ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಅಪಹರಣ ಮತ್ತು ಅತ್ಯಾಚಾರ ನಡೆಸಿದ ಪ್ರಕರಣ ದಾಖಲಾಗಿತ್ತು.