×
Ad

ಸರಕಾರ ಪಿಟಿ ಉಷಾರಿಗೆ ಮಂಜೂರು ಮಾಡಿದ ಮನೆ ಸ್ಥಳ ವಿವಾದದಲ್ಲಿ: ಮೈದಾನ ತುಂಡರಿಸಲು ಬಿಡೆವು ಎಂದ ಶಾಲಾಡಳಿತ

Update: 2016-03-06 18:34 IST

ಕೋಝಿಕ್ಕೋಡ್,ಮಾರ್ಚ್.6: ರಾಜಕೀಯದವರನ್ನು ಹೊರತು ಪಡಿಸಿ ಸೆಲೆಬ್ರಿಟಿಗಳು ಎಷ್ಟೇ ಭ್ರಷ್ಟಾಚಾರ ನಡೆಸಿದರೂ , ಸ್ವಜನ ಪಕ್ಷಪಾತ ನಡೆಸಿದರೂ ಪತ್ರಿಕೆಗಳು ಅಷ್ಟಾಗಿ ಗಮನಿಸುವುದಿಲ್ಲ. ರಾಜಕೀಯದವರ ಕುರಿತು ಇರುವುದು ಇಲ್ಲದ್ದನ್ನೆಲ್ಲ ಬರೆಯುವ ಪತ್ರಕರ್ತರು ಸಿನೆಮಾ ಮಂದಿ, ಬಿಸಿನೆಸ್‌ಮ್ಯಾನ್‌ಗಳು, ಕ್ರೀಡಾತಾರೆಗಳು, ಧಾರ್ಮಿಕ ಮುಖಂಡರು ಎಷ್ಟೇ ಭ್ರಷ್ಟಾಚಾರ ನಡೆಸಿದರೂ ದೊಡ್ಡದು ಮಾಡುವುದಿಲ್ಲ.ಇದಕ್ಕೆ ಅವರ ಅಭಿಮಾನಿಗಳು ಮತ್ತು ಅವರು ಪ್ರತಿನಿಧಿಸುತ್ತಿರುವ ಸಮಾಜಕ್ಕೆ ನೋವಾಗಬಹುದೇ ಎಂಬ ಕಾರಣವೂ ಇರಬಹುದು. ಆದ್ದರಿಂದ ಪ್ರಮುಖರು ಕ್ರೀಡಾಂಗಣವೆಂಬುದನ್ನೂ ಗಮನಿಸದೆ ಮನೆಕಟ್ಟುವುದಕ್ಕೆ ಹೊರಡುತ್ತಾರೆ. ಇದಕ್ಕೆ ಇತ್ತೀಚಿನ ಬಹುದೊಡ್ಡ ಉದಾಹರಣೆ ಪಿಟಿಉಷಾ . ದೇಶಕ್ಕೆ ಬೆಲೆಕಟ್ಟಲಾಗದ ಕೊಡುಗೆ ನೀಡಿದ ಮಹಿಳೆ ಪಿಟಿಉಷಾರಿಗೆ ತಕ್ಕದಾದ ಪುರಸ್ಕಾರವನ್ನು ನಾವು ನೀಡಬೇಕು. ಆದರೆ ಅವರಿಗಾಗಿ ಕಾನೂನು ಉಲ್ಲಂಘನೆ ಆದರೂ ಸುಮ್ಮನಿರಬೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲೀಗ ಉದ್ಭವಿಸುತ್ತದೆ.

ಈ ಮೊದಲೂ ಉಷಾರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಅದನ್ನು ಯಾರೂ ಗಮನಿಸದೆ ಮರೆಗೆ ಸರಿದಿದೆ. ಇದೀಗ ಸರಕಾರ ಪಿಟಿ ಉಷಾರಿಗೆ ಮನೆಗಾಗಿ ಮಂಜೂರು ಮಾಡಿದ ಸ್ಥಳದ ಕಾರಣವನ್ನು ಮುಂದಿಟ್ಟು ಈಗ ಪಿಟಿ ಉಷಾ ವಿರುದ್ಧ ಕೋಝಿಕ್ಕೋಡ್‌ನ ಟೆಕ್ನಿಕಲ್ ಸ್ಕೂಲ್ ವಿದ್ಯಾರ್ಥಿಗಳು ಮತ್ತು ಹೆತ್ತವರು ಅಪಸ್ವರ ಎತ್ತಿರುವುದು ವರದಿಯಾಗಿದೆ.ಆದರೂ ಅದರತ್ತ ಪತ್ರಿಕೆಗಳು ಗಮನ ಹರಿಸಿಲ್ಲ ಎನ್ನಲಾಗುತ್ತಿದೆ. ಸರಕಾರ ಕೋಝಿಕ್ಕೋಡ್ ನಗರದಲ್ಲಿ ಮನೆಕಟ್ಟಲಿಕ್ಕೆ ಸರ್ವೇ ನಿಯಮಗಳನ್ನು ಉಲ್ಲಂಘಿಸಿ ಪಿಟಿ ಉಷಾರಿಗೆ ಶಾಲೆಯ ಮೈದಾನವನ್ನು ನೀಡಿರುವುದು ಈಗ ವಿವಾದವಾಗಿದೆ.ಎಷ್ಟೇ ಸಿಕ್ಕಿದರೂ ದೂರುಗಳೇ ಇರುವ ಉಷಾ ಹಲವು ಮನೆಗಳು ಇದ್ದೂ ಸ್ಕೂಲ್ ಗ್ರೌಂಡ್‌ನ್ನು ತುಂಡರಿಸಿ ಹತ್ತು ಸೆಂಟ್ಸ್ ಸ್ಥಳವನ್ನು ನೀಡುವ ಸರಕಾರದ ನಿರ್ಧಾರವನ್ನು ವಿದ್ಯಾರ್ಥಿಗಳೂ ಹೆತ್ತವರೂ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ.

ಸೆಂಟ್‌ಗೆ ಮೂವತ್ತು ಲಕ್ಷ ಬೆಲೆಬರುವ ಸ್ಥಳವಿದೆಂದೂ ಇದನ್ನು ಪಿಟಿ ಉಷಾರಿಗೆ ಉಚಿತವಾಗಿ ಸರಕಾರ ಯಾವ ಲೆಕ್ಕದಲ್ಲಿ ಅನುಮತಿಸಿದೆ ಎಂದೂ ಪ್ರತಿಭಟನಾಕಾರರು ಪ್ರಶ್ನಿಸುತ್ತಿದ್ದಾರೆ. ತನಗೆ ಸರಕಾರ ಏನು ನೀಡಿಲ್ಲವೆಂಬುದು ಉಷಾರ ದೂರು ಆದರೆ ಅದು ಸರಿಯಲ್ಲ ಎಂದು ಅವರ ನಿಕಟವರ್ತಿಗಳೇ ಹೇಳುತ್ತಾರೆ. ಪಿಟಿ ಉಷಾರಿಗೆ ಈ ಮೊದಲು ಮನೆ ಕಟ್ಟಲು ಹಣಕಾಸು ನೆರವು ನೀಡಿದೆ. ಉಷಾಸ್ಕೂಲ್‌ಗೆ ಕಿನಲೂರಿನಲ್ಲಿ ಜಮೀನನ್ನು ವಶ ಪಡಿಸಿ ನೀಡಲಾಯಿತು. ಅವರ ಶಾಲೆಗೆ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ಸಣ್ಣ ಮೊತ್ತವೊಂದಕ್ಕೆ ಸರಕಾರ ಒದಗಿಸಿತು. ಒಂದು ಅವಧಿಂ ನಂತರ ಆ ಜಮೀನನ್ನು ಸ್ವಂತ ಮಾಡಿಕೊಳ್ಳಬಹುದೆಂದು ಸರಕಾರ ಪಟ್ಟೆ ಒಪ್ಪಂದದಲ್ಲಿ ತಿಳಿಸಿದೆ.

ಶಾಲೆಗೆ ಮೂಲಭೂತ ಸಕಲ ಸೌಕರ್ಯಗಳನ್ನು ಸರಕಾರಿ ಫಂಡ್ ಮೂಲಕವೇ ಭರಿಸಲಾಗಿದೆ. ಸಿಂಥೆಟಿಕ್ ಟ್ರಾಕ್ ನಿರ್ಮಿಸಲು ಕೋಟ್ಯಂತರ ರೂಪಾಯಿ ಕೇಂದ್ರಸರಕಾರ ನೀಡಿದೆ. ಕೇಂದ್ರ-ರಾಜ್ಯ ಸರಕಾರಗಳಲ್ಲದೆ ಹಲವಾರು ವ್ಯಕ್ತಿಗಳು ಮತ್ತು ಸಂಘಟನೆಗಳು ಆರ್ಥಿಕ ಸಹಾಯ ನೀಡುತ್ತಿವೆ. ಉಷಾರಿಂದ ಪ್ರಾರಂಭಿಸುವ ಒಂದು ಸಂಸ್ಥೆ ಎಂಬ ನೆಲೆಯಲ್ಲಿ ಬಾಲಿವುಡ್ ನಟರೂ, ಭಾರತದ ಬೃಹತ್ ಕಂಪೆನಿಗಳೂ ನೀಡಿದ ಹಣಕ್ಕೆ ಸ್ಪಷ್ಟ ಲೆಕ್ಕವಿಲ್ಲ. ಎಷ್ಟು ಸಿಕ್ಕಿದರೂ ಮತ್ತೂ ಸಾಲದ ಉಷಾರ ಕಿರುಕುಳ ಸಹಿಸಲಾಗದೆ ಅಂತಿಮವಾಗಿ ಮನೆ ಕಟ್ಟಲು ಹಣ ನೀಡಿತ್ತು. ಮನೆಯಿಲ್ಲದ ಕ್ರೀಡಾ ತಾರೆಯರಿಗೆ ಮನೆ ನೀಡುವಂತೆ ಅಲ್ಲ ಉಷಾರ ವಿಷಯ ಎಂದು ಹಲವರು ಹೇಳುತ್ತಾರೆ. ಇಷ್ಟೆಲ್ಲ ಕೊಡುಗೆಗಳನ್ನು ಪಡೆದರೂ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಟಿಂಟು ಲೂಕ ಮಾತ್ರ ಈವರೆಗೆ ಉಷಾರಿಂದ ಸಿಕ್ಕಿದ ಕೊಡುಗೆ ಎಂದು ಟೀಕಾಕಾರರು ಬೆಟ್ಟು ಮಾಡಿತೋರಿಸುತ್ತಾರೆ. ಆದರೆ ಯಾವ ನೆರವೂ ಇಲ್ಲದೆ ಹಲವಾರು ಟಿಂಟು ಲೂಕಗಳು ಕೇರಳದಲ್ಲಾಗಿದ್ದಾರೆ ಎಂದು ಇವರು ಹೇಳುತ್ತಿದ್ದಾರೆ.

 ವಿವಿಧ ವ್ಯಕ್ತಿಗಳ ನೆರವು ಸರಕಾರಿ ಧನಸಹಾಯದಿಂದ ಕಿನಲೂರಿನಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕ್ರೀಡಾ ತಾರೆಗಳಿಗೆ ಸ್ಪರ್ಧೆಯಲ್ಲಿ ವಿಜಗಳಿಸಿದಾಗ ಸಿಗುವ ಬಹುಮಾನದ ಶೇ. 25ರಷ್ಟನ್ನು ಈಡು ಮಾಡುತ್ತಾರೆ ಎಂದು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ವಿದ್ಯಾರ್ಥಿಗಳು ಹೇಳುತ್ತಾರೆ. ಉಷಾ ಸ್ಕೂಲ್‌ಗೆ ಹೆಸರುತಂದು ಕೊಟ್ಟ ಟಿಂಟುಲೂಕ ಗುಡಿಸಲಲ್ಲಿ ವಾಸಿಸುತ್ತಿದ್ದುದು ನಾಚಿಕಯಂತಾದಾಗ ಸರಕಾರ ಮನೆ ಕಟ್ಟಿಸಿ ಕೊಟ್ಟಿತು. ಡಿವಿಜನ್ ಮ್ಯಾನೇಜರ್ ಪದವಿಯಲ್ಲಿ ಉಷಾ ಕೆಲಸಕ್ಕೆ ಹೋಗದೆ ಲಕ್ಷರೂಪಾಯಿಯಷ್ಟು ಸಂಬಳವನ್ನೂ ಪಡೆಯುತ್ತಿದ್ದಾರೆ. ಇದು ಯಾವುದೂ ಸಾಲದೆ ಪುನಃ ಸರಕಾರದಿಂದ ಮನೆಕಟ್ಟಿಸಲು ಜಮೀನು ಪಡೆದಿದ್ದಾರೆ.

  ಕೊಯಿಲಾಂಡಿಯಲ್ಲಿ ಉಷಾರ ಸ್ಕೂಲ್ ಇರುವಾಗ ಕೋಝಿಕ್ಕೋಡ್ ನಗರದಲ್ಲಿ ಉಷಾರಿಗೆ ಯಾಕೆ ಮನೆ ಎಂದು ಕೆಲವರು ಪ್ರಶ್ನಿಸತೊಡಗಿದ್ದಾರೆ. ಇನ್ನು ಮನೆ ಕಟ್ಟಲೇ ಬೇಕೆಂದಿದ್ದರೆ ಕೋಝಿಕ್ಕೋಡ್ ಕೆಎಸ್ಸಾರ್ಟಿಸಿ ಸ್ಟ್ಯಾಂಡ್ ಸಮೀಪ ಉಷಾರಿಗೆ ಸ್ವಂತ ಜಾಗ ಇದೆ. ಇದು ಇದ್ದೂ ಸರಕಾರದಿಂದ ಅವರು ಮನೆಗೆ ಜಾಗ ಕೇಳಿದ್ದಾರೆಂಬುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸರಕಾರಿ ಭೂಮಿಯನ್ನು ಕಬಳಿಸಿದರೆ ಯಾರೂ ಕೇಳಲು ಬರುವುದಿಲ್ಲ. ಯಾವುದೇ ಪತ್ರಿಕೆಯಲ್ಲಿ ಸುದ್ದಿ ಬರುವುದಿಲ್ಲ ಎಂಬ ಚಿಂತನೆ ಉಷಾರದ್ದೆಂದು ಆರೋಪಿಸಲಾಗುತ್ತಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಕೋಝಿಕ್ಕೋಡ್ ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್, ವೆಸ್ಟ್ ಹಿಲ್ ಸರಕಾರಿ ಟೆಕ್ನಿಕಲ್ ಹೈಸ್ಕೂಲ್ ಎಂಬ ಸಂಸ್ಥೆಗಳಲ್ಲದೆ ಸಮೀಪದ ಹಲವಾರು ಶಾಲೆಗಳು, ರೆಸಿಡೆಂಟ್ಸ್ ಅಸೋಸಿಯೇಶನ್, ಸ್ಪೋರ್ಟ್ಸ್ ಕ್ಲಬ್‌ಗಳು ಕ್ರೀಡಾಭ್ಯಾಸಕ್ಕೆ ಬಳಸುವ ಮೈದಾನದಲ್ಲಿ ಸರಕಾರ ಪಿಟಿ ಉಷಾರಿಗೆ ಮನೆ ಕಟ್ಟಲು ನೀಡಲಾಗುತ್ತಿದೆ ಎಂಬುದ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕ್ರೀಡೆಗೆ ಅಗತ್ಯವಿರುವಷ್ಟು ಸ್ಥಳ ಇಲ್ಲದಿರುವಾಗ ನಗರದಲ್ಲಿ ಅಳಿದುಳಿದಿರುವ ಮೈದಾನ ಕಳಕೊಳ್ಳುವುದರ ವಿರುದ್ಧ ವೆಸ್ಟ್ ಹಿಲ್ ಪ್ರದೇಶದಲ್ಲಿ ಪೋಸ್ಟರ್‌ಗಳು ಕಾಣಿಸಿಕೊಂಡಿದೆ. ಆ್ಯಕ್ಷನ್ ಕಮಿಟಿ ರೂಪಿಕರಿಸಿ ಉಷಾರಿಗೆ ಮೈದಾನದ ಸ್ಥಳವನ್ನು ನೀಡುವುದನ್ನು ತಡೆಯಲಾಗುವುದೆಂದು ಪೋಸ್ಟರ್‌ಗಳಲ್ಲಿ ಎಚ್ಚರಿಕೆ ನೀಡಲಾಗಿದೆ.

ನಿಬಂಧನೆ ಪ್ರಕಾರ ಟೆಕ್ನಿಕಲ್ ಸ್ಕೂಲ್‌ಗೆ ಕನಿಷ್ಠ ಎರಡೂವರೆ ಎಕರೆ ಸ್ಥಳ ಬೇಕೆಂದಿರುವಾಗ ವೆಸ್ಟ್ ಹಿಲ್ ಟೆಕ್ನಿಕಲ್ ಸ್ಕೂಲ್ ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿರುವುದು. ಇಂತ ಪರಿಮಿತಿ ಇರುವಾಗ ಸರಕಾರ ಅದರಿಂದ ಹತ್ತು ಸೆಂಟ್ಸ್ ಜಮೀನು ಉಷಾರಿಗೆ ಸರಕಾರ ನೀಡಲು ಆದೇಶಿಸಿದೆ. ಇದರ ವಿರುದ್ಧ ಬಲವಾದ ಪ್ರತಿಭಟನೆಗೆ ಟೆಕ್ನಿಕಲ್ ಸ್ಕೂಲ್ ಆಡಳಿತ ಮಂಡಳಿ ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News