ರಾಷ್ಟ್ರೀಯ ಮತ್ಸಮೇಳ 2016 ರ ಸಮಾರೋಪ ಸಮಾರಂಭ
ಮಂಗಳೂರು,ಮಾ.6:ದ.ಕ ಜಿಲ್ಲೆಯಲ್ಲಿ ಮತ್ಸಾಲಯ ಸ್ಥಾಪನೆಯ ನಿಟ್ಟಿನಲ್ಲಿ ಬೇಡಿಕೆಯಿದ್ದು ಸುಮಾರು 15 ಕೋಟಿ ವೆಚ್ಚದಲ್ಲಿ ಮತ್ಸಾಲಯ ನಿರ್ಮಾಣದ ಬಗ್ಗೆ ಚಿಂತನೆಯಿದೆ. ಈ ಬಗ್ಗೆ ಮಂಗಳವಾರ ಮುಖ್ಯಮಂತ್ರಿಗಳ ಜೊತೆ ಮಂಗಳವಾರ ನಡೆಯುವ ಬಜೆಟ್ ಸಂಬಂಧಿತ ಚರ್ಚೆಯಲ್ಲಿ ಪ್ರಸ್ತಾವಿಸಲಾಗುವುದು ಎಂದು ಯುವಜನ ಸೇವೆ , ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ,ಮೀನುಗಾರಿಕೆ ಇಲಾಖೆ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ, ಹೈದರಾಬಾದ್ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ಸಂಯುಕ್ತ ಆಶ್ರಯದಲ್ಲಿ ನಗರದ ಟಿ.ಎಂ.ಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ರಾಷ್ಟ್ರೀಯ ಮತ್ಸಮೇಳ 2016 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮತ್ಸಾಲಯ ನಿರ್ಮಾಣದಿಂದ ಅಳಿವಿನಂಚಿರುವ ಕೆಲವು ಮೀನಿನ ಸಂತತಿಗಳನ್ನು ಸಂರಕ್ಷಿಸುವ ಮತ್ತು ವಿವಿಧ ಪ್ರದೇಶದ ಮೀನುಗಳನ್ನು ಸಂರಕ್ಷಿಸುವ ಪ್ರಕ್ರೀಯೆಯಾಗಲಿದೆ. ಈ ನಿಟ್ಟಿನಲ್ಲಿ ಮತ್ಸಾಲಯ ಸ್ಥಾಪನೆಗೆ ಸಂಬಂಧಪಟ್ಟಂತೆ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮೀನುಗಾರಿಕೆ ದೊಡ್ಡ ಉದ್ಯಮವಾಗಿದ್ದರೂ ಒಳನಾಡು ಮೀನುಗಾರಿಕೆ ನಮ್ಮಲ್ಲಿ ಅಷ್ಟೊಂದು ಆಶಾದಾಯಕವಾಗಿ ಅಭಿವೃದ್ದಿ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಒಳನಾಡು ಮೀನುಗಾರಿಕೆಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟಂತೆ ಮತ್ತು ಪಶು ಆರೋಗ್ಯ ಕುರಿತಾದ ವಿಚಾರಗಳಿಗೆ ಸಂಬಂಧಪಟ್ಟಂತೆ 31 ಕೃತಿಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್ ಲೋಬೋ, ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ದ.ಕ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಐ.ಶ್ರೀವಿದ್ಯಾ, ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ರೇಣುಕಾಪ್ರಸಾದ್, ಮೀನುಗಾರಿಕೆ ಇಲಾಖೆಯ ನಿರ್ದೇಶಕ ಹೆಚ್.ಎಸ್.ವೀರಪ್ಪಗೌಡ , ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ , ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತ ಚೇರ್‌ಮೆನ್ ಹಿರಿಯಣ್ಣ ಮುಂತಾದವರು ಉಪಸ್ಥಿತರಿದ್ದರು.