ಕಾರಿಗೆ ಟಿಪ್ಪರ್ ಢಿಕ್ಕಿ: ಮದ್ರಸ ಮುಖ್ಯ ಶಿಕ್ಷಕ ಮೃತ್ಯು
Update: 2016-03-06 22:36 IST
ಶಿವಮೊಗ್ಗ, ಮಾ.6: ಹೊಸನಗರ ತಾಲೂಕಿನ ಸಾಗರ ರಸ್ತೆ ಹೆದ್ದಾರಿಯಲ್ಲಿ ಕಾರು ಮತ್ತು ಟಿಪ್ಪರ್ ನಡುವೆ ರವಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್ ಪ್ರಧಾನ ಕಾರ್ಯದರ್ಶಿ, ರಿಪ್ಪನಪೇಟೆ ಮದ್ರಸದ ಸದ್‌ರ್ ಮುಅಲ್ಲಿಂ ತಸ್ಲೀಂ ಸಖಾಫಿ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇವರು ಬಟ್ಟಮಲ್ಲಪ್ಪ ದಿಂದ ರಿಪ್ಪನ್‌ಪೇಟೆಗೆ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬಟ್ಟಮಲ್ಲಪ್ಪ ಗ್ರಾಮದ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿರುವ ಇವರು ಸದ್ಯ ರಿಪ್ಪನ್‌ಪೇಟೆಯ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತರು ಪತ್ನಿ ಹಾಗೂ 20 ದಿನದ ಮಗು ಹಾಗು ತಂದೆ, ತಾಯಿ, ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.
ಟಿಪ್ಪರ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.