ವಿಕೃತ ಮನಸ್ಸುಗಳಿಂದ ಮಹಿಳೆಯರ ಶೋಷಣೆ: ಮಾಧವಿ ಭಂಡಾರಿ
ಉಡುಪಿ, ಮಾ.6: ಪುರುಷರಲ್ಲಿರುವ ವಿಕೃತ ಹಾಗೂ ವಿಕಾರ ಮನಸ್ಸುಗಳು ಮಹಿಳೆಯರನ್ನು ಶೋಷಣೆಗೆ ಒಳಪಡಿಸುತ್ತದೆ. ಕೆಲವರು ಮಾಡುವ ಇಂತಹ ಕೆಲಸದಿಂದ ಇಡೀ ಪುರುಷ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಲೇಖಕಿ, ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಹೇಳಿದ್ದಾರೆ.
ಉಡುಪಿ ದೇವಾಡಿಗ ಯುವ ವೇದಿಕೆಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಉಡುಪಿಯ ಶಾರದ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಳ್ಳಲಾದ ವಿಶ್ವ ದೇವಾಡಿಗ ಮಹಿಳಾ ವಿಚಾರ ಸಂಕಿರಣ ಹಾಗೂ ದೇವಾಡಿಗ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ ಹಾಗೂ ಸ್ವೇಚ್ಛಾಚಾರ ಬೇರೆ ಬೇರೆಯಾಗಿದೆ. ಸ್ವಾತಂತ್ರಕ್ಕೆ ಚೌಕಟ್ಟು ಇರುತ್ತದೆ. ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಅಸ್ಮಿತೆಯನ್ನು ತೋರಿಸಲು ಕಷ್ಟವಾಗುತ್ತದೆ ಎಂದ ಅವರು, ಒಂದು ಗಂಡಿಗೆ ಒಂದು ಹೆಣ್ಣನ್ನು ದೇವರು ಸೃಷ್ಟಿಸಿರುತ್ತಾನೆ ಎಂದು ಹೇಳಿದರೂ ಇಂದು ದೇಶದಲ್ಲಿ 1,000 ಪುರುಷರಿಗೆ ಕೇವಲ 918 ಮಹಿಳೆಯರಿದ್ದಾರೆ. ಇದಕ್ಕೆ ಕಾರಣ ಭ್ರೂಣಹತ್ಯೆ ಎಂದರು. ಅಬಲೆ ಎಂಬುದು ಮಹಿಳೆಯರಿಗೆ ಕೊರತೆಯಲ್ಲ. ಪ್ರಾಕೃತಿಕ ಭಿನ್ನತೆಯನ್ನು ಹೊರತು ಪಡಿಸಿದರೆ ಪುರುಷ ಹಾಗೂ ಮಹಿಳೆಯರ ಮಧ್ಯೆ ಯಾವುದೇ ವ್ಯತ್ಯಾಸಗಳಿಲ್ಲ. ಪ್ರಾಕೃತಿಕ ಭಿನ್ನತೆ ಎಂಬುದು ಅನ್ಯೋನತೆ ಹಾಗೂ ಅನಿವಾರ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಣ್ಣಾಗಿ ಹುಟ್ಟಿದಕ್ಕೆ ದುಃಖ ಪಡಬೇಡಿ. ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಿ. ನಮಗೆ ಬೇಕಾದ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಶೈಕ್ಷಣಿಕವಾಗಿ ತಮ್ಮನ್ನು ತಾವು ಎತ್ತರಕ್ಕೆ ಕೊಂಡೊಯ್ದು ಆರ್ಥಿಕ ಸ್ವಾವಲಂಬನೆಗೆ ಮಹತ್ವ ನೀಡಬೇಕು. ಇದರಿಂದ ಹೆಣ್ಣು-ಗಂಡು ಎಂಬ ಅಸಮಾನತೆಯನ್ನು ಅಳಿಸಿ ಹಾಕಬಹುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ದೇವಾಡಿಗ ಸಂಘದ ಪ್ರಮುಖರಾದ ವೇಣಿ ಮರೋಳಿ ಮಂಗಳೂರು, ಗೀತಾ ಕಲ್ಯಾಣಪುರ, ಲಲಿತಾ ಮುದ್ದಣ್ಣ, ಜ್ಯೋತಿ, ಸಾವಿತ್ರಿ ರಾಮ ದೇವಾಡಿಗ, ಗೀತಾ ಬಾರಕೂರು, ವೇದಿಕೆಯ ಸಂಘಟನಾ ಕಾರ್ಯ ದರ್ಶಿ ಜ್ಯೋತಿ ಪ್ರಶಾಂತ್ ಉಪಸ್ಥಿತರಿದ್ದರು. ಸುಶ್ಮಿತಾ ಸ್ವಾಗತಿಸಿದರು. ಬಳಿಕ ನಡೆದ ‘ಸಮಾಜದಲ್ಲಿ ಯುವ ಮಹಿಳೆಯರ ಪಾತ್ರ’ ಕುರಿತ ಗೋಷ್ಠಿಯಲ್ಲಿ ಮಂಜರಿ ಚಂದ್ರ, ನಿಮಿಕ ರತ್ನಾಕರ್, ನಮ್ರತಾ ಭಂಡಾರಿ, ದಾಮಿನಿ ದಾಮೋದರ್, ಯಶಸ್ವಿ ಮೋಹನ್‌ದಾಸ್ ವಿಚಾರ ಮಂಡಿಸಿದರು.