ಚುಟುಕು ಸುದ್ದಿಗಳು
ಇಂದು ಅಹವಾಲು ಸ್ವೀಕಾರ
ಉಡುಪಿ, ಮಾ.6: ಶಾಸಕ ಪ್ರಮೋದ್ ಮಧ್ವರಾಜ್ ಮಾ.7ರಂದು ಅಪರಾಹ್ನ 3ರಿಂದ 4ರವರೆಗೆ ಬ್ರಹ್ಮಾವರದ ತನ್ನ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದಿನಿಂದ ವಾರ್ಷಿಕ ಜಾತ್ರೆ ಕಾರ್ಕಳ, ಮಾ.6: ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 7ನೆ ವಾರ್ಷಿಕ ಜಾತ್ರೋತ್ಸವವು ಮಾ.7ರಿಂದ ಮಾ.13ರವರೆಗೆ ನೆರವೇರಲಿದೆ ಎಂದು ಪ್ರಕಟನೆ ತಿಳಿಸಿದೆ.
ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮ
ಕಾರ್ಕಳ, ಮಾ.6: ಕಾರ್ಕಳದ ಹಿರಿಯಂಗಡಿ ರಸ್ತೆಯ ಮಹಾವೀರ ಭವನದ ಹಿಂಬದಿಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಾ.7ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದೊಂದಿಗೆ ಶಿವರಾತ್ರಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನಾಳೆ ಸಭೆ
ಕಾಸರಗೋಡು, ಮಾ.6: ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜಕೀಯ ಪ್ರತಿನಿಧಿಗಳ ಸಭೆಯು ಮಾ.8ರಂದು ಪೂರ್ವಾಹ್ನ 11:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಚುನಾವಣಾಧಿಕಾರಿ ತಿಳಿಸಿದ್ದಾರೆ.
ನಾಳೆ ಮಹಿಳಾ ದಿನಾಚರಣೆ
ಕಾಸರಗೋಡು, ಮಾ.6: ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ಮಾ.8ರಂದು ಹೆಲ್ಪ್‌ಲೈನ್ ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಮಹಿಳಾ ದಿನ ಆಚರಿಸಲಾಗುವುದು. ಬೆಳಗ್ಗೆ 10ಕ್ಕೆ ಕುಂಬಳೆ ವ್ಯಾಪಾರ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪ ನ್ಯಾಯಾಧೀಶೆ ಫಿಲಿಪ್ ಥಾಮಸ್ ಉದ್ಘಾಟಿಸುವರು.
ಸಮಾರಂಭದಲ್ಲಿ ಹೆಲ್ಪ್‌ಲೈನ್ ಕಾಸರಗೋಡು ಏರ್ಪಡಿಸಿದ್ದ ಸ್ತ್ರೀ ಶಕ್ತಿ ಪುರಸ್ಕಾರ ವಿತರಿಸಲಾಗುವುದು. ಸೈಬರ್ ನಿಯಮಗಳ ಬಗ್ಗೆ ಪೊಲೀಸ್ ಅಧಿಕಾರಿ ಅಭಿಲಾಶ್ ತರಗತಿ ನಡೆಸುವರು.
ಅರ್ಜಿ ಆಹ್ವಾನ
ಮಂಗಳೂರು, ಮಾ.6: ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಮಂಗಳೂರು ರಾಮಕೃಷ್ಣ ಬಾಲಕಾಶ್ರಮವು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಶ್ರಮದ ವಾತಾವರಣದಲ್ಲಿ, ಸ್ವಾಮೀಜಿಯವರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದುವರಿಯಲು ತರಬೇತಿ ನೀಡಲಾಗುವುದು. ಶಿಕ್ಷಣ, ಊಟ, ವಸತಿಗಳನ್ನು ಉಚಿತವಾಗಿ ಒದಗಿಸಲಾಗುವುದು. 7ನೆ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ, ಕನ್ನಡ ಮಾಧ್ಯಮದ ಗಂಡು ಮಕ್ಕಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. 8ನೆ ತರಗತಿಗೆ ಮಾತ್ರ ಪ್ರವೇಶ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೆ 5 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0824-241 4216ನ್ನು ಸಂಪರ್ಕಿಸಬಹುದು.
ಹಳೆ ವಿದ್ಯಾರ್ಥಿ ಸಂಘ ಪ್ರಶಸ್ತಿಗೆ ಆಹ್ವಾನ
ಮಂಗಳೂರು, ಮಾ.6: ನಗರದ ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಎಪ್ರಿಲ್ ಮೊದಲನೆ ವಾರದಲ್ಲಿ ಹಳೆ ವಿದ್ಯಾರ್ಥಿ ಸಂಘ ಪ್ರಶಸ್ತಿ-2016 ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಂತರ್ ಕಾಲೇಜು ಸಂಗೀತ ಸ್ಫರ್ಧೆ ಹಾಗೂ ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟದ ಮೊದಲ ಸುತ್ತಿನ ಸ್ಪರ್ಧಾ ಕಾರ್ಯಕ್ರಮಗಳು ಮಾ.18 ಮತ್ತು 19ರಂದು ನಡೆಯಲಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯವ್ಯಾಪ್ತಿಗೆ ಬರುವ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ. ಧರ್ಮಣ್ಣ ನಾಯ್ಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು: ಉದ್ಯೋಗ ಮೇಳ
ಕಾಸರಗೋಡು, ಮಾ.6: ಕೇಂದ್ರ ಉದ್ಯೋಗ ಸಚಿವಾಲಯ ಮತ್ತು ಕಾಸರಗೋಡು ವಿವೇಕಾನಂದ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್, ಯುವ ಕಿರಣ್‌ನ ಜಂಟಿ ಆಶ್ರಯದಲ್ಲಿ ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ಮೆಗಾ ಉದ್ಯೋಗ ಮೇಳ ನಡೆಯಿತು. ಕಾರ್ಯಕ್ರಮವನ್ನು ಚಿನ್ಮಯ ಮಿಶನ್‌ನ ಸ್ವಾಮಿ ವಿವೇಕಾನಂದ ಉದ್ಘಾಟಿಸಿದರು. ಪ್ರತಾಪ್ ಅಧ್ಯಕ್ಷತೆ ವಹಿಸಿದ್ದರು ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸುರೇಂದ್ರನ್, ನ್ಯಾಯವಾದಿ ಕೆ. ಕರುಣಾಕರನ್, ವೇಣುಗೋಪಾಲ್ ಮಾತನಾಡಿದರು. ಪಿ.ಜಿ. ರಾಮಚಂದ್ರನ್ ಸ್ವಾಗತಿಸಿದರು. ಎನ್. ಸತೀಶನ್ ವಂದಿಸಿದರು.
ಮಾಹಿತಿಗೆ ಸೂಚನೆ
ಕಾಸರಗೋಡು, ಮಾ.6: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸಂಸ್ಥೆಗಳ ಮುಖ್ಯಸ್ಥರ ಹಾಗೂ ನೌಕರರ ಮಾಹಿತಿಗಳನ್ನು ಮಾ.8ರೊಳಗೆ ಆಯಾ ಗ್ರಾಮ ಕಚೇರಿಯಲ್ಲಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಇ. ದೇವದಾಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸುಳ್ಯ: ಪರವಾನಿಗೆ ವಿತರಣೆ
ಸುಳ್ಯ, ಮಾ.6: ಆನ್‌ಲೈನ್ ಮೂಲಕ ಜನಹಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕೇವಲ ನಾಲ್ಕೇ ದಿನದಲ್ಲಿ ಪರವಾನಿಗೆ ಲಭಿಸುತ್ತಿದೆ. ಮಾ. 1ರಂದು ಅರ್ಜಿ ಸಲ್ಲಿಸಿದ ನಾಲ್ವರಿಗೆ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಟ್ರೇಡ್ ಲೈಸನ್ಸ್‌ನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರಿಂದ ಸೀನಿಯರಿಟಿ ಪ್ರಕಾರ ಪರವಾನಿಗೆ ನೀಡಲಾಗುತ್ತಿದೆ. ಇಲ್ಲಿ ಭ್ರಷ್ಟಾಚಾರರಹಿತವಾಗಿ ಕೆಲಸ ಆಗುತ್ತದೆ. ಕೆಲಸ ಆದ ಕೂಡಲೆ ಜನಹಿತ ತಂತ್ರಾಂಶದಿಂದ ಪಲಾನುಭವಿಯ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತದೆ ಎಂದವರು ಹೇಳಿದರು.
ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ಕುರಿತು ಇಂಜಿನಿಯರ್ ಶ್ರೀದೇವಿ ಮಾಹಿತಿ ನೀಡಿದರು. ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಗಿರೀಶ್ ಕಲ್ಲುಗದ್ದೆ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸರಕಾರಿ ನೌಕರರ ಸಂಘದ ಮನವಿ
ಪುತ್ತೂರು, ಮಾ.6: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ತಾಲೂಕು ವತಿಯಿಂದ ರಾಜ್ಯ ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಪುತ್ತೂರು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಬಿ. ರಾಮಯ್ಯ ನಾಯ್ಕಾ, ಹಾಜಿ ಎ. ಇಬ್ರಾಹೀಂ, ಯಶೋದಾ ರಾವ್, ಐತ್ತಪ್ಪನಾಯ್ಕ, ಎಂ. ಶರತ್ ಕುಮಾರ್ ರಾವ್, ಜಗನ್ನಾಥ ರೈ, ಚಂದ್ರಶೇಖರ ನಾಯ್ಕಾ, ಸದಸ್ಯರಾದ ಕೆ. ನಾರಾಯಣ ರೈ, ಬಿ. ಜನಾರ್ದನಯ್ಯ, ಪಿ. ಜಯಂತಿ ನಾಯ್ಕ್ಕಾ, ಎನ್. ನಾರ್ಣಪ್ಪ ನಾಯ್ಕಾ, ಶಿವಾನಂದ, ಶಂಕರಿ ಎಂ.ಎಸ್.ಭಟ್, ಲೀನಾ ಪುಡ್ತಾದೋ, ಸೂರಪ್ಪಗೌಡ, ನಿರ್ಮಲಾ ಬಿ.ಕೆ. ಮತ್ತಿತರರು ಉಪಸ್ಥಿತರಿದ್ದರು.
ಏಮ್ಸ್ ಕಾಲೇಜಿನಲ್ಲಿ 'ಶಿಕ್ಷಣದ ವ್ಯಾಪಾರೀಕರಣ' ಸಂವಾದ
ಕಡಬ, ಮಾ.6: ಶಿಕ್ಷಣ ಇಂದು ವ್ಯಾಪಾರೀಕರಣ ಗೊಳ್ಳುತ್ತಿದೆ. ಜ್ಞಾನದಾಹವನ್ನು ನೀಗಿಸಬೇಕಾದ ಶಿಕ್ಷಣ ಸಂಸ್ಥೆಗಳು ಆಡಂಬರದ ಕೇಂದ್ರಗಳಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಮಾನವೀಯ ವೌಲ್ಯ ಕುಸಿಯುತ್ತಿದೆ. ಏಕರೂಪದ ಶಿಕ್ಷಣ ವ್ಯವಸ್ಥೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಯುವ ಲೇಖಕ ಇಸ್ಮತ್ ಪಜೀರ್ ಅಭಿಪ್ರಾಯಪಟ್ಟಿದ್ದಾರೆ. ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ಬ್ಯಾರಿ ಸಂಘದ ಆಶ್ರಯದಲ್ಲಿ ನಡೆದ ಶಿಕ್ಷಣದ ವ್ಯಾಪಾರೀಕರಣ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಂಶುಪಾಲೆ ಸೆಮಿರಾ ಕೆ.ಎ. ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎಂ.ಆರಿಫ್ ಕಲ್ಕಟ್ಟ ಕಾರ್ಯಕ್ರಮ ಉದ್ಘಾ ಟಿಸಿದರು. ವೇದಿಕೆಯಲ್ಲಿ ಏಮ್ಸ್ ಕಾಲೇಜಿನ ಗೌರವ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್, ಉಪನ್ಯಾಸಕಿ ದೀಪಿಕಾ, ಬ್ಯಾರಿ ಸಂಘದ ಸಂಯೋಜಕ ಮುಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನ್ವತ್ ಬಾನು ಪ್ರಾರ್ಥಿಸಿದರು. ಮುಹಮ್ಮದ್ ಅಭಿಝಿರ್ ವಂದಿಸಿದರು. ಅಶಿಬಾ ಕಾರ್ಯಕ್ರಮ ನಿರೂಪಿಸಿದರು.
ಜ್ಞಾನ ಮತ್ತು ಕೌಶಲ ಭವಿಷ್ಯ ನಿರ್ಧರಿಸುತ್ತದೆ: ಪ್ರೊ.ರಾಮೇಗೌಡ
ಕೊಣಾಜೆ, ಮಾ.6: ಉತ್ತಮ ಜೀವನವನ್ನು ಕಂಡುಕೊಳ್ಳಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಜ್ಞಾನ ಮತ್ತು ಕೌಶಲ ಪ್ರಮುಖ ಪಾತ್ರವಹಿಸುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಬೋರೆಗೌಡ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ 2015-16ನೆ ಸಾಲಿನ ಸಮಾಜಶಾಸ್ತ್ರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ವಿನಯ್ ರಜತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುವೆಂಪು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಚಂದ್ರಶೇಖರ್, ಡಾ.ಆಂಜನಪ್ಪ, ಶಿಕಾರಿಪುರ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶೇಖರ್, ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಕಿರಣ್ ಪ್ರಸಾದ್, ರಶ್ಮಿ ಉಪಸ್ಥಿತರಿದ್ದರು.
ಶಿಕ್ಷಕ ಕೆ.ಟಿ.ಆಳ್ವರಿಗೆ ಸನ್ಮಾನ
ಮಂಗಳೂರು,ಮಾ.4: ನಗರದ ಪುರಭವನದಲ್ಲಿ ನಡೆದ ಒಡಿಯೂರು ಗುರುದೇವಾ ಸೇವಾ ಬಳಗದ ದಶಮಾನೋತ್ಸವ ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಕೆ.ಟಿ.ಆಳ್ವ (ಕುದ್ರೆಪ್ಪಾಡಿ ತಿಮ್ಮಣ್ಣ ಆಳ್ವ) ಮಾಡಿದ ಸೇವಾಕಾರ್ಯಗಳನ್ನು ಗುರುತಿಸಿ 'ಆದರ್ಶ ಅಧ್ಯಾಪಕ' ಬಿರುದು ನೀಡಿ ಒಡಿಯೂರು ಸ್ವಾಮೀಜಿ ಸನ್ಮಾನಿಸಿದರು. ಈ ಸಂದರ್ಭ ಗುರುಸೇವಾ ಬಳಗದ ಅಧ್ಯಕ್ಷ ಜಯಂತ ಜೆ. ಕೋಟ್ಯಾನ್, ವಾಸುದೇವ ಕೊಟ್ಟಾರಿ , ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ
ಮಂಗಳೂರು, ಮಾ.6: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಮಂಗಳೂರು ವಿವಿ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಅಂಗವಾಗಿ 'ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ ಬಿ., ಮಾತೃ ಭಾಷೆ ಮುಖಾಂತರ ರಾಜ್ಯದ ಮತ್ತು ದೇಶದ ಸಂಸ್ಕೃತಿ ಹಾಗೂ ಕಲೆಯನ್ನು ಸಂರಕ್ಷಿಸಲು ಸಾಧ್ಯ. ಕೆಳಹಂತದ ನ್ಯಾಯಾಲಯಗಳಲ್ಲಿ ಕನ್ನಡ ಬಳಸಬೇಕೆಂಬ ನಿರ್ದೇಶನಗಳಿದ್ದರೂ ಇಚ್ಫಾಶಕ್ತಿಯ ಕೊರತೆಯಿಂದ ಅದು ಕಾರ್ಯಗತಗೊಳ್ಳುತ್ತಿಲ್ಲ. ವಕೀಲರು ಮತ್ತು ನ್ಯಾಯಾಧೀಶರು ಮನಸ್ಸು ಮಾಡಿದರೆ ಮಾತೃ ಭಾಷೆಯಲ್ಲಿ ವ್ಯವಹರಿಸಬಹುದು ಎಂದರು.
ಕುಕ್ಕಾಜೆ: ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟ
ವಿಟ್ಲ, ಮಾ.6: ಕುಕ್ಕಾಜೆ ಫ್ರೆಂಡ್ಸ್ ಕ್ಲಬ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಕುಕ್ಕಾಜೆ ಶಾಲಾ ಮೈದಾನದಲ್ಲಿ ನಡೆದ ಹನುಮಂತಪ್ಪ ಕೊಪ್ಪದ್ ಟ್ರೋಫಿ-2016 ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟದಲ್ಲಿ ಕುಕ್ಕಾಜೆ ಸೂಪರ್ ಕಿಂಗ್ಸ್ ತಂಡವು ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.6 ತಂಡಗಳು ಭಾಗವಹಿಸಿದ್ದ ಈ ಪ್ರೀಮಿಯರ್‌ಲೀಗ್ ಮಾದರಿಯ ಪಂದ್ಯಾಟದಲ್ಲಿ ಇರಾ ವಾರಿಯರ್‌ಇರಾ ತಂಡವು ದ್ವಿತೀಯ, ಸೆವೆನ್ ಟೈಗರ್ಸ್ ಎನ್.ಸಿ.ರೋಡ್ ತಂಡ ತೃತೀಯ ಹಾಗೂ ಸ್ಟಾರ್ ರೈಡರ್ಸ್ ಪದವು ತಂಡವು ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಸರಣಿ ಶ್ರೇಷ್ಠ ಹಾಗೂ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಕುಕ್ಕಾಜೆ ಸೂಪರ್ ಕಿಂಗ್ಸ್ ತಂಡದ ರಶೀದ್ ಬನಾರಿ ಪಡೆದುಕೊಂಡರೆ, ಅದೇ ತಂಡದ ಶಾಫಿ ಕುಕ್ಕಾಜೆ ಹಿಡಿತಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಇರಾ ವಾರಿಯರ್ಸ್ ತಂಡದ ಇರ್ಶಾದ್ ಆಲ್ ರೌಂಡರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸಭಾ ಕಾರ್ಯಕ್ರಮವನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಎಂ.ಎಸ್.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾ.ಪಂ. ಸದಸ್ಯ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲುಕ್ಮಾನ್, ಪತ್ರಕರ್ತರಾದ ಲುಕ್ಮಾನ್, ಲತೀಫ್‌ನೇರಳಕಟ್ಟೆ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾಜಿ ಕೆ. ಶೇಖಬ್ಬ, ಕೆ.ಎಸ್. ಹಮೀದ್ ಕಂಬಳಬೆಟ್ಟು, ಮಂಚಿ ಗ್ರಾ.ಪಂ. ಸದಸ್ಯ ಶಮೀವುಲ್ಲಾ, ಮಾಜಿ ಅಧ್ಯಕ್ಷ ಶ್ರೀಪತಿ ರಾವ್, ಮೋಹನ್ ಕುಕ್ಕಾಜೆ, ಸಂತೋಷ್ ಕೆ.ಎಂ.ಎಂ. ಕಾಪಿಕಾಡ್, ಕುಕ್ಕಾಜೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನ್ಸಾರ್ ಡಿ.ಕೆ., ಸದಸ್ಯ ಹಮೀದ್ ಪುಚ್ಚಕೆರೆ, ನಝೀರ್ ನಾಡಾಜೆ, ರಾಜೇಶ್ ಶೆಟ್ಟಿ ಕುಕ್ಕಾಜೆ, ಡಿಲ್ಸನ್ ಪಿರೇರಾ ಅತಿಥಿಗಳಾಗಿ ಭಾಗವಹಿಸಿದ್ದರು. ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ಮಂಚಿ ಗ್ರಾ.ಪಂ. ಸದಸ್ಯ ಇಬ್ರಾಹೀಂ ಕುಕ್ಕಾಜೆ, ಕುಕ್ಕಾಜೆ ನವಯುಗ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಸೈನಾರ್, ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುರ್ರಹ್ಮಾನ್, ಕರೀಂ ಬೊಳ್ಳಾಯಿ, ಫೈಝಲ್ ಕುಕ್ಕಾಜೆ, ಝುಬೈರ್ ಕುಕ್ಕಾಜೆ ಉಪಸ್ಥಿತರಿದ್ದರು. ಕುಕ್ಕಾಜೆ ಫ್ರೆೆಂಡ್ಸ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ವಂದಿಸಿದರು. ದಿವಾಕರ ಉಪ್ಪಳ ಹಾಗೂ ನಝೀರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು