ಎರೆಹುಳ ಗೊಬ್ಬರ ತಯಾರಿಕೆ ಘಟಕ ಆರಂಭ
Update: 2016-03-06 23:52 IST
ಪುತ್ತೂರು, ಮಾ.6: ಎರೆಹುಳಗಳ ಸಾಕಣೆಯು ಘನತ್ಯಾಜ್ಯಗಳ ನಿರ್ವಹಣೆಗೆ ಒಂದು ಸುಲಭ ವಿಧಾನ. ಎರೆಹುಳಗಳು ಸಾವಯವ ತ್ಯಾಜ್ಯಗಳನ್ನು ತಿಂದು ಗೊಬ್ಬರವನ್ನಾಗಿ ಪರಿವರ್ತಿಸುವುದರಿಂದ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್‌ನಿರ್ದೇಶಕ ರೆ. ಡಾ.ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು. ಪುತ್ತೂರಿನ ಫಿಲೊಮಿನಾ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ವಠಾರದಲ್ಲಿ ಸ್ಥಾಪಿಸಲ್ಪಟ್ಟ ದೊಡ್ಡ ಪ್ರಮಾಣದ ಎರೆಹುಳ ಗೊಬ್ಬರ ತಯಾರಿಕಾ ಘಟಕ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಲಿಯೊ ನೊರೊನ್ಹ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ವನ್ಯಶ್ರೀ ಪ್ರಾರ್ಥಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಮೀನಾಕ್ಷಿ ಕೆ. ಸ್ವಾಗತಿಸಿದರು. ಪ್ರಾಧ್ಯಾಪಕ ಪ್ರೊ.ನಾಗರಾಜು ಉಪಸ್ಥಿತರಿದ್ದರು. ಬಿಪಿನ್ ವಂದಿಸಿದರು. ಶ್ರದ್ಧಾ ಸರೋಜ್ ಕಾರ್ಯಕ್ರಮ ನಿರೂಪಿಸಿದರು.