×
Ad

ಮಂಜೇಶ್ವರ ವಿಧಾನಸಭಾ ಚುನಾವಣೆ ಟಿಕೆಟ್: ಸ್ಥಳೀಯರಿಗೆ ಆದ್ಯತೆ

Update: 2016-03-07 17:04 IST

ಕಾಸರಗೋಡು, ಮಾ.7: ವಿಧಾನಸಭಾ ಚುನಾವಣೆಗೆ ಮಂಜೇಶ್ವರದಿಂದ ಸ್ಥಳೀಯ ಮುಖಂಡರನ್ನು ಕಣಕ್ಕಿಳಿಸುವ ಬಗ್ಗೆ ಸಿಪಿಎಂ ಮತ್ತು ಬಿಜೆಪಿ ಈಗಾಗಲೇ ಗಂಭೀರ ಚಿಂತನೆ ನಡೆಸಿದ್ದು, ಸ್ಥಳೀಯ ಮುಖಂಡರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ.

ಕಳೆದ ಹಲವು ಚುನಾವಣೆಯಲ್ಲಿ ಕ್ಷೇತ್ರದ ಹೊರಗಿನ ಅಭ್ಯರ್ಥಿಗಳನ್ನೇ ಪ್ರಮುಖ ಪಕ್ಷಗಳು ಕಣಕ್ಕಿಳಿಸಿದ್ದವು. ಐಕ್ಯರಂಗವು ಈಗಾಗಲೇ ಹಾಲಿ ಶಾಸಕ ಪಿ.ಬಿ. ಅಬ್ದುರ್ರಝಾಕ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇವರು ಕಾಸರಗೋಡು ವಿಧಾನಸಭಾ ಕ್ಷೇತ್ರದವರು. 30 ವರ್ಷಗಳಿಂದ ಕ್ಷೇತ್ರದ ಹೊರಗಿನ ಅಭ್ಯರ್ಥಿಗಳೇ ಇಲ್ಲಿಂದ ಶಾಸಕರಾಗಿದ್ದಾರೆ. 20 ವರ್ಷಗಳ ಕಾಲ ಚೆರ್ಕಳಂ ಅಬ್ದುಲ್ಲಾ, ಬಳಿಕ ಐದು ವರ್ಷಗಳ ಕಾಲ ಸಿ. ಎಚ್.ಕುಂಞಂಬು, ಐದು ವರ್ಷಗಳಿಂದ ಪಿ.ಬಿ. ಅಬ್ದುರ್ರಝಾಕ್ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

 ಕಳೆದ ಬಾರಿ ಐಕ್ಯರಂಗ, ಎಡರಂಗ ಮತ್ತು ಬಿಜೆಪಿ ಕೂಡ ಹೊರಗಿನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು. ಆದರೆ ಈ ಬಾರಿ ಸಿಪಿಎಂ ಮತ್ತು ಬಿಜೆಪಿ ಸ್ಥಳಿಯರನ್ನೇ ಕಣಕ್ಕಿಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಸಿಪಿಎಂನಿಂದ ಶಂಕರ ರೈ ಮಾಸ್ಟರ್‌ರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ. ಪುತ್ತಿಗೆ ನಿವಾಸಿಯಾಗಿರುವ ಇವರು ಕಳೆದ ಬಾರಿ ಜಿಪಂ ಸದಸ್ಯರಾಗಿದ್ದರು. ಇದಲ್ಲದೆ ಕೆ.ಆರ್.ಜಯಾನಂದರ ಹೆಸರು ಕೂಡಾ ಕೇಳಿಬರುತ್ತಿದೆ. ಮಾಜಿ ಶಾಸಕ ಸಿ.ಎಚ್.ಕುಂಞಂಬು ಮಂಜೇಶ್ವರದಿಂದ ಸ್ಪರ್ಧಿಸಲು ಹಿಂದೇಟು ಹಾಕಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರ ಹೆಸರು ಕೇಳಿಬರುತ್ತಿದೆ.

ಬಿಜೆಪಿಯಿಂದ ಜಿಪಂ ಸದಸ್ಯ ಕೆ.ಶ್ರೀಕಾಂತ್ ಮತ್ತು ಮಾಜಿ ಜಿಲ್ಲಾಧ್ಯಕ್ಷ ಸುರೇಶ್‌ಕುಮಾರ್ ಶೆಟ್ಟಿ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ. ಹೊರ ಜಿಲ್ಲೆಯವರಾದ ಕಳೆದ ಬಾರಿ ಸೋತ ಕೆ. ಸುರೇಂದ್ರನ್‌ರ ಹೆಸರು ಅಂತಿಮಗೊಳಿಸಿತ್ತು. ಆದರೆ ಸ್ಥಳೀಯ ಒಂದು ಬಣದ ವಿರೋಧದ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಕನ್ನಡಿಗರು ಸೇರಿದಂತೆ ಸ್ಥಳೀಯರ ಮತ ಪಡೆಯಲು ಸ್ಥಳೀಯರೇ ಅಭ್ಯರ್ಥಿಯಾಗಬೇಕೆಂಬ ಬೇಡಿಕೆ ಪಕ್ಷದಿಂದ ಕೇಳಿಬರುತ್ತಿದೆ. ಇದಲ್ಲದೆ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿಯವರ ಹೆಸರು ಕೂಡಾ ಕೇಳಿಬರುತ್ತಿದೆ. 20 ವರ್ಷಗಳ ಬಳಿಕ 2006ರಲ್ಲಿ ಸಿ.ಎಚ್. ಕುಂಞಂಬುರವರ ಮೂಲಕ ಸಿಪಿಎಂ ಮಂಜೇಶ್ವರ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. 2011ರಲ್ಲಿ ಮತ್ತೆ ಐಕ್ಯರಂಗವು ಈ ಕ್ಷೇತ್ರವನ್ನು ಬಗಲಿಗೆ ಹಾಕಿಕೊಂಡಿತ್ತು. ಬಿಜೆಪಿ ಎರಡು ಬಾರಿಯೂ ಎರಡನೇ ಸ್ಥಾನ ಪಡೆದಿತ್ತು. ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಮಂಜೇಶ್ವರದಲ್ಲಿ ಯಾರೆಲ್ಲ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕುತೂಹಲವಾಗಿದೆ.

 ಉದುಮದಿಂದ ಮತ್ತೆ ಕೆ. ಕುಂಞಿರಾಮನ್: ಉದುಮ ಕ್ಷೇತ್ರದಿಂದ ಸಿಪಿಎಂ ಹಾಲಿ ಶಾಸಕ ಕೆ.ಕುಂಞಿರಾಮನ್‌ರನ್ನು ಕಣಕ್ಕಿಸಲಿದೆ. ಕಾಂಗ್ರೆಸ್‌ನಿಂದ ಕಣ್ಣೂರು ಮಾಜಿ ಸಂಸದ ಕೆ.ಸುಧಾಕರನ್ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದು, ಇವರ ಜೊತೆಗೆ ಸತೀಶನ್ ಪಾಚೇನಿ, ಟಿ. ಸಿದ್ದೀಕ್ ಹಾಗೂ ಸ್ಥಳೀಯ ಮುಖಂಡರ ಹೆಸರು ಕೇಳಿಬರುತ್ತಿದೆ.

   ತ್ರಿಕ್ಕರಿಪುರದಿಂದ ಸಿಪಿಎಂನ ಎಂ.ವಿ. ಬಾಲಕೃಷ್ಣನ್ ಅಥವಾ ಎಂ. ರಾಜಗೋಪಾಲ್‌ರನ್ನು ಕಣಕ್ಕಿಸಲು ಮತ್ತು ಹಾಲಿ ಶಾಸಕ ಕೆ. ಕುಂಞಿರಾಮನ್‌ರಿಗೆ ಈ ಬಾರಿ ಟಿಕೆಟ್ ನೀಡದಿರಲು ಪಕ್ಷ ತೀರ್ಮಾನಿಸಿದೆ ಕಾಂಗ್ರೆಸ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾಸರಗೋಡು ಕ್ಷೇತ್ರವನ್ನು ಮಿತ್ರ ಪಕ್ಷವಾದ ಐಎನ್‌ಎಲ್ಗೆ ನೀಡಲಾಗಿದ್ದು, ಐಎನ್‌ಎಲ್ ಈ ಬಾರಿ ಅಭ್ಯರ್ಥಿ ಕಣಕ್ಕಿಲಿಸದಿದ್ದಲ್ಲಿ ಸಿಪಿಎಂ ಸ್ಪರ್ಧಿಸಲಿದೆ. ಐಕ್ಯರಂಗ ಪಿ.ಬಿ ಅಬ್ದುರ್ರಝಾಕ್‌ರನ್ನು ಕಣಕ್ಕಿಳಿಸಿದ್ದು, ಬಿಜೆಪಿಯಿಂದ ಪ್ರಮಿಳಾ ಸಿ. ನಾಯಕ್‌ರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News