ಮಂಗಳೂರು: ಮನಪಾದಿಂದ 1200ಕ್ಕೂ ಅಧಿಕ ಮಂದಿಗೆ ವಿವಿಧ ಸವಲತ್ತುಗಳ ವಿತರಣೆ
ಮಂಗಳೂರು, ಮಾ.7: ನಗರದ ಪುರಭವನದಲ್ಲಿ ಇಂದು ಮಂಗಳೂರು ಮಹಾನಗರ ಪಾಲಿಕೆಯ ಬಡತನ ನಿರ್ಮೂಲನಾ ಕೋಶದಡಿ 1200ಕ್ಕೂ ಅಧಿಕ ಮಂದಿಗೆ 68,30,400 ರೂ.ಗಳ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್. ಲೋಬೋ, ಸಮಾಜದ ಅತಿ ದುರ್ಬಲ ವರ್ಗದವರಿಗೆ ಸೌಲಭ್ಯಗಳು ದೊರಕಿದಾಗ ಅದಕ್ಕೊಂದು ಮಹತ್ವ ಸಿಗುತ್ತದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ರಾಜ್ಯದ ವಿವಿಧ ಮೂಲೆಗಳಲ್ಲಿ ಬಡವರ ಕಣ್ಣೀರನ್ನು ಒರಸುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಮೊಯ್ದಿನ್ ಬಾವಾ ಮಾತನಾಡಿ, ಮನಪಾದಿಂದ ಗ್ರಾಮಾಂತರ ರಸ್ತೆಗಳ ಕಾಂಕ್ರಿಟೀಕರಣ ಮಾಡುವ ಕಾರ್ಯ ನಡೆಯುತ್ತಿದೆ. ಜತೆಗೆ ನಗರದಲ್ಲಿ ದುರ್ಬಲ ವರ್ಗದವರಿಗೆ ವಸತಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಅರ್ಹ ಕಾರ್ಯಕ್ರಮಗಳು ಜನರಿಗೆ ತಲುಪಬೇಕಾದರೆ ಬಡವರ ಬಗ್ಗೆ ಚಿಂತನೆ ಮಾಡುವ ಸರಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಐದು ಮಂದಿ ವಿಕಲಚೇತನರಿಗೆ 248800 ರೂ. ವೆಚ್ಚದ ಶ್ರವಣ ಸಾಧನ, 504 ಮಂದಿಗೆ 3024000 ರೂ. ಪೋಷಣಾ ಭತ್ತೆ, 25 ಮಂದಿಗೆ 160000 ರೂ.ಗಳ ವ್ಯಾಸಂಗೇತರ ಚಟುವಟಿಕೆ, 3 ವಿಕಲಚೇತನ ಸಂಸ್ಥೆಗೆ 45,000 ರೂ. ಸಹಾಯದನ, 3 ಮಂದಿಗೆ ಸ್ವ ಉದ್ಯೋಗಕ್ಕಾಗಿ 150,000ರೂ., 3,08,000 ರೂ.ಗಳಲ್ಲಿ 4 ಮಂದಿಗೆ ಹೆಚ್ಚುವರಿ ಎರಡು ಚಕ್ರಗಳುಳ್ಳ ದ್ವಿಚಕ್ರ ಸೌಲಭ್ಯ, 706 ಮಂದಿಗೆ ಶೇ. 24.10 ಮತ್ತು ಶೇ. 7.25 ಮೀಸಲು ನಿಧಿಯಡಿ ಅಡುಗೆ ಅನಿಲ ಸಂಪರ್ಕ ವಿತರಣೆ ಸೇರಿದಂತೆ 1200ಕ್ಕೂ ಅಧಿಕ ಮಂದಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ಪ್ರಕಾಶ್ ಸಾಲಿಯಾನ್, ದೀಪಕ್ ಪೂಜಾರಿ, ಕೇಶವ ಮರೋಳಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮನಪಾ ಬಡತನ ನಿರ್ಮೂಲನಾ ಕೋಶದ ಸಮುದಾಯ ಅಧಿಕಾರಿ ಮಾಲಿನಿ ರಾಡ್ರಿಗಸ್ ಹಾಗೂ ಅವರ ತಂಡವನ್ನು ಅಭಿನಂದಿಸಲಾಯಿತು.
ವೆನ್‌ಲಾಕ್‌ನಲ್ಲಿ ಶೀಘ್ರವೇ ಶೀಘ್ರ ರೋಗ ಪತ್ತೆ ಕೇಂದ್ರ ಆರಂಭ ಸರಕಾರದ ವಿವಿಧ ಸವಲತ್ತುಗಳ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕು ಎಂದು ಹೇಳಿದ ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್,0- 18 ವರ್ಷದೊಳಗಿನ ಬಿಪಿಎಲ್ ಕಾರ್ಡುದಾರರಲ್ಲಿನ ವಿಕಲಚೇತನತೆಯನ್ನು ಮುಂಚಿತವಾಗಿ ಪತ್ತೆಹಚ್ಚುವ ಸೂಕ್ತ ಚಿಕಿತ್ಸೆ ಒದಗಿಸಲು ಸಹಾಯವಾಗುವಂತೆ ವೆನ್‌ಲಾಕ್‌ನಲ್ಲಿ ‘ಅರ್ಲಿ ಡಿಟೆಂಕ್ಷನ್ ಸೆಂಟರ್’ (ಶೀಘ್ರ ರೋಗ ಪತ್ತೆ ಕೇಂದ್ರ) ತೆರೆಯಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವರಾದ ಬಿ. ರಮಾನಾಥ ರೈ, ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಬಲಿಷ್ಟ ಸಮಾಜ ನಿರ್ಮಾಣಕ್ಕೆ ಕಾಂಗ್ರೆಸ್ ಸರಕಾರ ಒತ್ತು ನೀಡಿದ ಪರಿಣಾಮವಾಗಿ, ಹಿಂದೆ ಗ್ರಾಮದಲ್ಲಿ 10 ಜನ ಹಕ್ಕುಪತ್ರದಾರಿದ್ದವರ ಸಂಖ್ಯೆ ಇಂದು ಸಾವಿರಾರು ಸಂಖ್ಯೆಗೆ ಏರುವಂತಾಗಿದೆ. ಸೈದ್ಧಾಂತಿಕ ನಿಲುವಿನಲ್ಲಿ ಸರಕಾರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ಈ ಬದಲಾವಣೆ ಸಾಧ್ಯವಾಗಿದ್ದು, ಯುವಕರು ಇತಿಹಾಸವನ್ನು ಅರಿತುಕೊಳ್ಳುವ ಮೂಲಕ ಬದುಕಿಗೆ ನೆರವಾದವರನ್ನು ನೆನಪಿಡುವಂತಾಗಬೇಕು ಎಂದರು.
ಮುಂದಿನ ವರ್ಷ 3 ಪ್ರಮುಖ ಕಾರ್ಯ: ಡಾ.ಗೋಪಾಲಕೃಷ್ಣ
ಮಂಗಳೂರು ಮಹಾನಗರ ಪಾಲಿಕೆಯು ಮುಂದಿನ ವರ್ಷ ಮಂಗಳೂರು ನಗರವನ್ನು ಸೀಮೆಎಣ್ಣೆ ಮುಕ್ತ ನಗರವ್ನನಾಗಿ ಘೋಷಿಸಲು, ಮಲೇರಿಯಾ ಮುಕ್ತ ನಗರವನ್ನಾಗಿಸಲು ಹಲವಾರು ಕಾರ್ಯಕ್ರಮಗಳು ಹಾಗೂ ಬಯಲು ಶೌಚಾಯಯ ಮುಕ್ತ ನಗರವನ್ನಾಗಿಸಲು ನಗರದಲ್ಲಿ ಬಾಕಿ ಇರುವ 1500 ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡುವ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಆಯುಕ್ತ ಡಾ. ಎಚ್.ಗೋಪಾಲಕೃಷ್ಣ ನುಡಿದರು.
ಮನಕಲಕುವ ದೃಶ್ಯವದು...!
ಕಾಲುಗಳಲ್ಲಿ ಶಕ್ತಿ ಇಲ್ಲದ ಗಂಡನಿಗೆ ಪತ್ನಿಯ ಆಸರೆ, ವಿಶೇಷ ಮಗುವಿಗೆ ತಾಯಿಯ ಆಸರೆ, ಇಂತಹ ಆಸರೆಯ ಬದುಕಿನ ಮನಕಲಕುವ ಸನ್ನಿವೇಶದ ನಡುವೆಯೂ ಅವೆರಲ್ಲರ ಮೊಗದಲ್ಲಿ ಸರಕಾರದ ನೆರವಿನ ಆಶಾ ಭಾವ. ಕೆಲವರಿಗೆ ಸರಕಾರದ ಕಾರ್ಯದ ಬಗ್ಗೆ ಸಾರ್ಥಕತೆಯ ಭಾವವಾದರೆ, ಮತ್ತೆ ಕೆಲವರ ಮೊಗದಲ್ಲಿ ನಿರಾಶೆ. ಬಡತನದ ಬೇಗೆಯಿಂದ ನೊಂದ ಬಡ ಜೀವಗಳ ಇಂತಹ ನೂರಾರು ಮನಕಲಕುವ ದೃಶ್ಯಗಳಿಗೆ ಇಂದು ನಗರದ ಪುರಭವನ ಸಾಕ್ಷಿಯಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಡಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮದಿಂದಾಗಿ ಪುರಭವನ ತುಂಬಿ ತುಳುಕುತ್ತಿತ್ತು. ನಗರದ ವಿವಿಧ ಕಡೆಗಳಿಂದ ಬಂದಿದ್ದ ಬಹುತೇಕ ಫಲಾನುಭವಿಗಳು ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಹಾಜರಾಗಿದ್ದರು. ಪುರಭವನದ ಹೊರಗಡೆ ಸರತಿ ಸಾಲಿನಲ್ಲಿ ನಿಂತು ಮನಪಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ತಮಗೆ ಸವಲತ್ತು ಸಿಗುವುದನ್ನು ಖಾತರಿಪಡಿಸಿಕೊಂಡರು. ನಂತರ ಪುರಭವನದ ಒಳಗಡೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಹಾಗೂ ಗಣ್ಯರು ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರೆ, ಉಳಿದ ಸುಮಾರು 1000ಕ್ಕೂ ಅಧಿಕ ಫಲಾನುಭವಿಗಳಿಗೆ ಬಳಿಕ ವಿತರಿಸಲಾಯಿತು.
ಪತ್ನಿಗೆ ಸೌಲಭ್ಯ ಸಿಗದ ನಿರಾಶೆ- ಮಗನಿಗೆ ಸಿಕ್ಕ ಸಂತಸ!
‘‘ನನ್ನ ಪತ್ನಿ ಪೋಲಿಯೋ ಪೀಡಿತೆ. ಪಾದಗಳಲ್ಲಿ ಬಲವಿಲ್ಲ. ನಡೆದಾಡಲು ಸಾಧ್ಯವಾಗುತ್ತಿಲ. ಅದಕ್ಕಾಗಿ ವಿಶೇಷ ಶೂಗಳಿಗಾಗಿ ಕಳೆದ ವರ್ಷ ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ಬಾರಿ ಆ ಸೌಲಭ್ಯ ಸಿಕ್ಕಿಲ್ಲ. ಆದರೆ ವಿಶೇಷ ಚೇತನ ಪುತ್ರನಿಗೆ ಪೋಷಣಾ ಭತ್ತೆ ಸಿಕ್ಕಿದೆ’’ ಎಂದು ನಿರಾಶೆಯ ನಡುವೆಯೂ ಸಂತಸ ವ್ಯಕ್ತಪಡಿಸಿದರು ಕುಳಾಯಿಯ ಕಾವಿನಕಲ್ಲು ನಿವಾಸಿ, ವೃತ್ತಿಯಲ್ಲಿ ಟೈಲರ್ ಆಗಿರುವ ಗೋಪಾಲ. ಅವರು ತಮ್ಮ ಪತ್ನಿ ಪೋಲಿಯೋ ಪೀಡಿತೆ ಸುಂದರಿ ಹಾಗೂ ಪುತ್ರ ಪುನೀತ್ ಜತೆ ಪುರಭವನಕ್ಕೆ ಆಗಮಿಸಿದ್ದರು.
ವಾಹನ ಉದ್ಯೋಗಕ್ಕೊಂದು ಆಸರೆ!
‘‘ನಾನು 2 ವರ್ಷದ ಮಗುವಿದ್ದಾಗ ಆಸ್ಪತ್ರೆಯಲ್ಲಿ ನೀಡಲಾದ ತಪ್ಪು ಇಂಜೆಕ್ಷನ್‌ನ ಪ್ರಭಾವದಿಂದ ಕಾಲಿನ ಸ್ವಾಧೀನ ಕಳೆದುಕೊಂಡೆ. ಪೋಷಕರ ಸಣ್ಣ ಮಟ್ಟಿನ ವ್ಯವಹಾರದಿಂದಾಗಿ ನನ್ನನ್ನವರು ಸಾಕುತ್ತಿದ್ದರು. ಇದೀಗ ನಾನೂ ದುಡಿಯಬೇಕೆಂಬ ನನ್ನ ಬಯಕೆಗೆ ಹೆಚ್ಚುವರಿ ಎರಡು ಚಕ್ರಗಳುಳ್ಳ ದ್ವಿಚಕ್ರ ವಾಹನ ಆಸರೆಯಾಗುವ ನಿರೀಕ್ಷೆ ಹುಟ್ಟಿದೆ’’ ಎಂದು 24ರ ಹರೆಯದ ಮರ್ವಿನ್ ಡಿಸೋಜಾ ಜಪ್ಪಿನಮೊಗರು ನಗುತ್ತಾ ನುಡಿದರು.
ಇದೇ ವೇಳೆ ಪುರಭವನದೊಳಗಡೆ ವಿವಿಧ ಸೌಲಭ್ಯಗಳನ್ನು ಅಧಿಕಾರಿಗಳು ಫಲಾನುಭವಿಗಳ ಹೆಸರು ಕರೆದು ವಿತರಿಸುತ್ತಿದ್ದರೆ, ತಮ್ಮ ಹೆಸರಿಗಾಗಿ ಎದುರು ನೋಡುತ್ತಿದ್ದ ವೃದ್ಧೆಯೊಬ್ಬರು ‘‘ನಮಗೆ ಈಗ ಸೀಮೆಎಣ್ಣೆ ಸಿಗುವುದಿಲ್ಲ. ಇವತ್ತು ಗ್ಯಾಸ್ ಸೌಲಭ್ಯ ಕೊಡುತ್ತೇವೆಂದು ಹೇಳಿದ್ದಾರೆ. ಸಿಗುತ್ತದಲ್ಲಾ’’ ಎಂದು ಕುತೂಹಲದಿಂದ ಪ್ರಶ್ನಿಸುತ್ತಿದ್ದರು.