×
Ad

ಪರಿಸರ ಶಿಕ್ಷಣ ಅಭಿಯಾನ ಮೂಡುಬಿದಿರೆಯಿಂದ ಕುದುರೆಮುಖದತ್ತ "ಚಿಣ್ಣರ ವನ್ಯ ದರ್ಶನ"

Update: 2016-03-07 18:18 IST

ಮೂಡುಬಿದಿರೆ : ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಬೆಳೆಸಲು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸಿಗುವ ಪುಸ್ತಕದ ಶಿಕ್ಷಣ ಸಾಲದು ಬದಲಾಗಿ ಪರಿಸರದಲ್ಲಿ ಬೆರೆತು ಪಡೆಯುವ ಶಿಕ್ಷಣ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ ಎಂಬುದನ್ನು ಅರಿತಿರುವ ವಿದ್ಯಾರ್ಥಿಗಳಿಗಾಗಿ ಪರಿಸರ ಶಿಕ್ಷಣ ಅಭಿಯಾನದೆಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ಮೂಡುಬಿದಿರೆ ವಲಯಾರಣ್ಯಾಧಿಕಾರಿಗಳ ಕಛೇರಿಯ ವತಿಯಿಂದ ಮೂಡುಬಿದಿರೆಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದತ್ತ "ಚಿಣ್ಣರ ವನ್ಯ ದರ್ಶನ"ವನ್ನು ಶನಿವಾರದಂದು ಏರ್ಪಡಿಸಲಾಗಿತ್ತು.  "ಚಿಣ್ಣರ ವನ್ಯ ದರ್ಶನ"ವು ರಾಜ್ಯ ಅರಣ್ಯ ಇಲಾಖೆಯ ನೂತನ ಕಾರ್ಯಕ್ರಮವಾಗಿದ್ದು ಮೂಡುಬಿದಿರೆಯ ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್ ಅವರ ನೇತೃತ್ವದಲ್ಲಿ ಕಲ್ಲಬೆಟ್ಟು ಎಕ್ಸಲೆಂಟ್‌ನ ಫ್ರೌಢಶಾಲೆಯ 9ನೇ ತರಗತಿಯ 39 ವಿದ್ಯಾರ್ಥಿಗಳಿಗೆ ನಾರಾವಿಯ ಕುತ್ಲೂರು ನರ್ಸರಿ, ಹೊಸ್ಮಾರಿನ ಡಿಪ್ಪೋ, ಪೆರ್ನೋಡಿ ನೆಡುತೋಪು, ಹನುಮಾನ್ ಗುಂಡಿ ಹಾಗೂ ಕುದುರೆಮುಖದ ರಾಷ್ಟ್ರೀಯ ಉದ್ಯಾವನದ ಬಗ್ಗೆ ಪರಿಚಯ ಹಾಗೂ ಅರಣ್ಯ ಇಲಾಖೆ, ಇಲಾಖಾಧಿಕಾರಿಗಳು, ಅರಣ್ಯ ಹಾಗೂ ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.  ಅಬ್ಬಾಸ್ ಸಾ ಮಿಲ್‌ಲ್ನ ಮಾಲಕ ಮಹಮ್ಮದಾಲಿ ಅಬ್ಬಾಸ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅರಣ್ಯ ಸಂರಕ್ಷಣೆ, ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಕ್ಕಳ ಬಾಯಿಯಿಂದಲೇ ಹೇಳುವಂತೆ ಮಾಡಿದ್ದರಲ್ಲದೆ ಮಕ್ಕಳ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಕ್ರೀಡೆಗಳನ್ನು ಜತೆಗೆ ರಸಪ್ರಶ್ನೆಗಳನ್ನು ಏರ್ಪಡಿಸಿ ಮಕ್ಕಳನ್ನು ಹುರಿದುಂಬಿಸಿ ಅರಣ್ಯ ಪ್ರದೇಶದೆಡೆಗೆ ಸೆಳೆದರು.  ನಾರಾವಿ ಕುತ್ಲೂರು ನರ್ಸರಿಯಲ್ಲಿರುವ ಗಿಡಗಳ ಬಗ್ಗೆ ಪರಿಚಯ, ಮಣ್ಣಿನ ಸಂರಕ್ಷಣೆಯ ಬಗ್ಗೆ ಹಾಗೂ ಹೊಸ್ಮಾರು ಡಿಪ್ಪೋದ ಬಗ್ಗೆ ಹೊಸ್ಮಾರಿನ ಉಪವಲಯಾರಣ್ಯಾಧಿಕಾರಿ ಮಂಜುನಾಥ್ ಗಾಣಿಗ ಮತ್ತು ಮೂಡುಬಿದಿರೆ ಉಪವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಅವರು, ಕುದುರೆಮುಖ ವಲಯ ಉಪವಲಯಾರಣ್ಯಾಧಿಕಾರಿ ದರ್ಶನ್ ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅವನತಿಗೆ ಕಾರಣವಾಗಿರುವ ಗಣಿಗಾರಿಕೆ, ಕಾಡು ಪ್ರಾಣಿಗಳು ವಿನಾಶದಂಚಿಗೆ ಸರಿಯಲು ಕಾರಣವಾಗಿರುವ ಮಾನವರ ನೀತಿಯ ಬಗ್ಗೆ, ನೀರು ಮತ್ತು ಮಣ್ಣಿನ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ತಡೆಗೋಡೆ ಚೆಕ್ ಡ್ಯಾಮ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News