ಕದಳೀ ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀ ಪಟ್ಟಾಭಿಷೇಕ
ಮಂಗಳೂರು,ಮಾ.7: ದಕ್ಷಿಣ ಭಾರತದ ನಾಥ ಪಂಥದ ಪ್ರಮುಖ ಕೇಂದ್ರವಾದ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರ ಪಟ್ಟಾಭಿಷೇಕವು ಧಾರ್ಮಿಕ ವಿಧಿವಿಧಾನ ಮತ್ತು ನಾಥ ಪಂಥದ ಕ್ರಮದ ಪ್ರಕಾರ ಇಂದು ನಡೆಯಿತು.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ನೂತನ ರಾಜರ ಆಯ್ಕೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು, ನಾಥಪಂಥದ ಮುಖಂಡರುಗಳು, ಜೋಗಿ ಸಮಾಜದ ಭಾಂಧವರು ಸಾಕ್ಷಿಯಾದರು.
ಇದೇ ವೇಳೆ ವಿಟ್ಲ ಜೋಗಿ ಮಠದ ಅರಸುವಾಗಿ ಯೋಗಿ ಶ್ರೀ ಶ್ರದ್ಧಾನಾಥ್‌ಜೀಯವರು ಪಟ್ಟಾಭಿಷೇಕಗೊಂಡರು.
ಫೆ.26 ರಿಂದ ಪ್ರತಿ ಮುಂಜಾನೆ ನಡೆಯುವ ದೂನಿ ಪೂಜೆಯ ಂದು ಮುಝನಾಎ 4ರಿಂದ 5 ಗಮಟೆಯವರೆಗೆ ನಡೆದು ಬಳಿಕ ಪಾರಂಪರಿಕ ತಂತ್ರಿಗಳಾದ ವಿಠಲ ತಂತ್ರಿಯವರ ನೇತತ್ವದಲ್ಲಿ ವೈದಿಕ ವಿಧಾನದಲ್ಲಿ ಪಟ್ಟಾಭಿಷೇಕ ನಡೆದರೆ ೀ ಪ್ರಕ್ರೀಯೆ ಮುಗಿದ ಬಳಿಕ ನಾಥಪಂಥದ ಸನ್ಯಾಸಿಗಳ ಮುಖಂಡತ್ವದಲ್ಲಿ ನಾಥಪಂಥದ ಕ್ರಮಪ್ರಕಾರ ಪಟ್ಟಾಭಿಷೇಕ ನಡೆಯಿತು.
ನಾಸಿಕ್‌ನ ತ್ರಯಂಕೇಶ್ವರ ನಡೆಯುವ ಕುಂಭಮೇಳದಲ್ಲಿ ನಿರ್ಧಾರವಾದಂತೆ ನಾಗರಪಂಚಮಿ ದಿನ ಝಂಡಿಯಾತ್ರೆಯಲ್ಲಿ ಹೊರಟ ನಾಥಪಂಥದ ಸನ್ಯಾಸಿಗಳು ಫೆ.26ಕ್ಕೆ ಮಂಗಳೂರಿಗೆ ಆಗಮಿಸಿ ಶಿವರಾತ್ರಿಯ ದಿನದಂದು ಪಟ್ಟಾಭಿಷೇಕ ನಡೆಸಿದರು.
ವೈದಿಕ ರೀತಿಯಲ್ಲಿ ಮತ್ತು ನಾಥ ಪಂಥದ ಕ್ರಮಪ್ರಕಾರ ನಡೆದ ಪಟ್ಟಾಭಿಷೇಕದ ನಂತರ ಸಾವಿರಾರು ಸಂಖ್ಯೆಯ ಭಕ್ತರು ಆಶಿರ್ವಾದ ಪಡೆದರು.
ಈ ಮೂಲಕ ಮುಂದಿನ ಹನ್ನೆರಡು ವರ್ಷ ಕದಳೀ ಪೀಠ ಹಾಗೂ ವಿಟ್ಲ ಜೋಗಿ ಮಠದ ಆಡಳಿತ ನಿರ್ವಹಣೆಯನ್ನು ನಿರ್ಮಲ್‌ನಾಥ್‌ಜೀ ಹಾಗೂ ಶ್ರದ್ಧಾನಾಥ್‌ಜೀ ವಹಿಸಲಿದ್ದಾರೆ.
ಮಠದ ಆವರಣದಲ್ಲಿರುವ ಶಿಲಾ ಪೀಠದಲ್ಲಿ ಉಭಯ ಯೋಗಿಗಳನ್ನು ಕುಳ್ಳಿರಿಸಿ ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಿ ನಂತರ ನಿರ್ಮಲ್‌ನಾಥ್‌ಜೀಗೆ ನಿರ್ಗಮನ ಪೀಠಾಪತಿ ಸಂಧ್ಯಾನಾಥ್‌ಜೀ ಪಟ್ಟದ ಕತ್ತಿಯನ್ನು ನೀಡಿ ರಾಜ ತಿಲಕವನ್ನಿಟ್ಟರು.
ಈ ಪ್ರಕ್ರಿಯೆ ಮುಗಿದ ಬಳಿಕ ಪಟ್ಟಾಭಿಷಿಕ್ತ ರಾದ ನೂತನ ರಾಜ ತಾನು ತಂದ ಪಾತ್ರ ದೇವತೆಯನ್ನು ಪ್ರತಿಷ್ಠಾಪಿಸಿದರು. ನಿರ್ಗಮನ ಪೀಠಾಧಿಪತಿಗಳು ಅವರ ಕಾಲದವರೆಗೆ ತನ್ನಿಂದ ಪೂಜಿಸಲ್ಪಟ್ಟ ಪಾತ್ರ ದೇವತೆಯನ್ನು ಅಲ್ಲಿಂದ ತೆರವುಗೊಳಿಸಿದರು. ಬಳಿಕ ನಿರ್ಗಮನ ಪೀಠಾಪತಿಗಳು ತನ್ನ ಆಡಳಿತ ಲೆಕ್ಕಪತ್ರಗಳನ್ನು, ಸ್ಥಿರ, ಚರ ಸೊತ್ತುಗಳ ವಿವರಗಳನ್ನು ಪ್ರಾಮಾಣಿಕವಾಗಿ ನೂತನ ಪೀಠಾಪತಿಗಳಿಗೆ ಆಡಳಿತ ಸಮಿತಿಯ ಸಮಕ್ಷಮದಲ್ಲಿ ಒಪ್ಪಿಸಿ ಕದಳೀವನದ ಪರಂಪರೆಯಂತೆ ಸಾಂಕೇತಿಕ ಸಮಾಧಿ ಹೊಂದಲು ಸಿದ್ಧರಾದರು.
ಸಮಾಧಿ ಹೊಂದಲು ನಿರ್ಗಮನ ಪೀಠಾಪತಿಯವರು ತಾನು ತಂದ ಪಾತ್ರ ದೇವತೆಯನ್ನು ಹಿಡಿದುಕೊಂಡು ತನ್ನ ಅನುಯಾಯಿಗಳೊಂದಿಗೆ ಬೊಕ್ಕಪಟ್ಣ ಬೋಳೂರಿನ ತಣ್ಣೀರುಬಾವಿ ಸಮುದ್ರದಲ್ಲಿ ಪಾತ್ರ ದೇವತೆಯನ್ನು ವಿಸರ್ಜಿಸಿ ಪೂಜೆ ಸಲ್ಲಿಸಿ, ಮೂರು ಬಾರಿ ಸಮುದ್ರದಲ್ಲಿ ಮುಳುಗೆದ್ದು ಜಲ ಸಮಾಧಿ ಎಂಬ ಸಂಕೇತವನ್ನು ಆಚರಿಸಿ ಮರಳಿದರು. ನಂತರ ಅವರಿಗೆ ನೂತನ ಪೀಠಾಪತಿಗಳು ಅವರ ಮುಂದಿನ ಪ್ರಯಾಣಕ್ಕೆ ಸೌಕರ್ಯ ಕಲ್ಪಿಸಿಕೊಡುವುದು ಇಲ್ಲಿನ ಧಾರ್ಮಿಕ ಪ್ರಕ್ರೀಯೆ.
ಈ ಎಲ್ಲಾ ವಿಧಾನಗಳು ಮುಗಿದ ಬಳಿಕ ನೂತನ ಪೀಠಾಪತಿಗಳ ಜತೆಯಲ್ಲಿ ಹೊಸ ಸಿಬ್ಬಂದಿಗಳು ಮಠದ ಆಡಳಿತಕ್ಕೆ ನಿಯೋಜಿಸಲ್ಪಡುತ್ತಾರೆ. ಮಹಂತ ಸೂರಜ್‌ನಾಥ್ ಜೀ, ಮಹಂತ ಕಷ್ಣಾನಾಥ್ ಜೀ, ಮಹಂತ ಸೋಮನಾಥ್ ಜೀ, ಮಹಂತ ಶಿವನಾಥ್‌ಜೀ, ಮಹಂತ ರವೀಂದ್ರನಾಥ ಜೀ, ಮಹಂತ ಡಾ. ಕಷ್ಣಾನಾಥ್ ಜೀ ಮಹಾರಾಷ್ಟ್ರ ಉಪಸ್ಥಿತರಿದ್ದರು.
ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಹೆಚ್. ಕೆ. ಪುರುಷೋತ್ತಮ್, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಜೋಗಿ ಸಮಾಜದ ಮುಂದಾಳುಗಳಾದ ಡಾ. ಕೇಶವನಾಥ್, ಎಂ. ರಾಮಚಂದ್ರ, ಸತೀಶ್ ಮಾಲೆಮಾರ್, ಗಂಗಾಧರ, ಯೋಗೀಶ್, ಮಾಜಿ ಸಚಿವ ಕಷ್ಣ ಜೆ. ಪಾಲೆಮಾರ್, ವಿಧಾನ ಸಭೆಯ ಮಾಜಿ ಉಪ ಸಭಾಪತಿ ಎನ್. ಯೋಗೀಶ್ ಭಟ್, ನಗರ ಪಾಲಿಕೆ ಸದಸ್ಯರಾದ ರೂಪಾ ಡಿ. ಬಂಗೇರಾ, ಡಿ. ಕೆ. ಅಶೋಕ್ ಕುಮಾರ್, ರಾಜೇಶ್ ಕೆ., ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಮೇಯರ್ ದಿವಾಕರ್ ಮೊದಲಾದವರು ಭಾಗವಹಿಸಿದ್ದರು.