ಕಂಬಳ ಕ್ರೀಡೆಗೆ ಅಡ್ಡಿ ಸರಿಯಲ್ಲ- ಸಚಿವ ವಿನಯ ಕುಲಕರ್ಣಿ
ಪುತ್ತೂರು: ಎತ್ತು, ಕೋಣಗಳನ್ನು ಮನೆ ಸದಸ್ಯರಂತೆ ಸಾಕಿ ವರ್ಷಕ್ಕೆ ಒಂದು ಬಾರಿ ಕ್ರೀಡೋತ್ಸವ ಆಚರಿಸುವುದಕ್ಕೆ ಪ್ರಾಣಿ ದಯಾ ಸಂಘಟನೆಗಳು ಅಡ್ಡ ಬರುವುದನ್ನು ಮೊದಲು ನಿಲ್ಲಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು.
24ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಷಕ್ಕೆ ಒಂದು ದಿನ ಆಚರಣೆ ನಡೆಸಿ ಕೋಣಗಳನ್ನು ಅದರ ಪಾಡಿಗೆ ಬಿಟ್ಟು ಬಿಡುವುದಿಲ್ಲ. ಯಜಮಾನ ತನ್ನ ಹೊಟ್ಟೆಗೆ ತಿನ್ನದಿದ್ದರೂ ಕೋಣದ ಹೊಟ್ಟೆ ತುಂಬಿಸುತ್ತಾನೆ. ಮಕ್ಕಳಂತೆ ಸಾಕಿ ಸಲಹುತ್ತಾನೆ. ರೈತರು ದನಕ್ಕೆ ಯಾವುದೇ ಕಾರಣಕ್ಕೂ ಆಹಾರ ಕಡಿಮೆ ಮಾಡುವುದಿಲ್ಲ. ಆದ್ದರಿಂದಲೇ ಕಂಬಳ ಕೃಷಿ ಜೀವನದ ಜತೆಗೆ ಹಾಸು ಹೊಕ್ಕಾಗಿದೆ. ಒಂದು ವೇಳೆ ಕಂಬಳ ನಿಲ್ಲಿಸಿದ್ದೇ ಆದರೆ ಮುಂದಿನ ಪೀಳಿಗೆ ಇಂತಹ ಕ್ರೀಡೋತ್ಸವವನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದ ಪ್ರಾಣಿ ದಯಾ ಸಂಘಟನೆಗಳು ಕಂಬಳಕ್ಕೆ ಅಡ್ಡ ಬರುವ ಕಾಯಕದಿಂದ ಹಿಂದೆ ಸರಿಯುವಂತೆ ಸೂಚಿಸಿದರು.
ಕೃಷಿಕನಾಗಬೇಕು ಎಂದು ಆಸೆಪಟ್ಟವನು ತಾನು. ರಾಜಕಾರಣಿ ಆಗಬೇಕೆಂದು ಕನಸು ಕಂಡವನಲ್ಲ. 27ನೇ ವರ್ಷದಲ್ಲೇ ಹೈನುಗಾರಿಕೆಯನ್ನು ಆರಂಭಿಸಿದ್ದು 1 ಲಕ್ಷ ರೂ.ಗಳಿಂದ. ಇಂದು 1600 ದನ ತನ್ನ ಬಳಿಯಿವೆ. ಹೈನುಗಾರಿಕೆಯಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿದ್ದೇನೆ. ನಮ್ಮೂರಲ್ಲೂ ಹೋರಿ ಓಟ ಆಯೋಜಿಸುತ್ತೇವೆ. ಕಂಬಳ ಇದರಿಂದ ತೀರಾ ಭಿನ್ನವಾಗೇನೂ ಇಲ್ಲ. ಕೃಷಿ ಜೀವನದ ಪ್ರತೀಕ ಇವುಗಳು. ಕೃಷಿಕರು ಹೋರಿ, ಕೋಣಗಳನ್ನು ಜತನದಿಂದ ಬೆಳೆಸುತ್ತಾರೆ. ಪ್ರಾಣಿ ದಯ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಕಂಬಳ ಸಮಿತಿ ಗೌರವಾಧ್ಯಕ್ಷ, ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ರೈತ, ಮಣ್ಣು, ಕ್ರೀಡೆಗಳ ನಡುವೆ ಅನ್ಯೋನ್ಯ ಸಂಬಂಧವಿದೆ. ಕಂಬಳ ಎನ್ನುವ ಹೆಸರಿನಲ್ಲಿ ಕ್ರೀಡೆಗೆ ಸಹಕಾರ ನೀಡಲಾಗುತ್ತಿದೆ. ಪ್ರಾಣಿ ದಯ ಸಂಘಟನೆಗಳಿಂದ ಕಂಬಳಕ್ಕೆ ಆತಂಕ ಸೃಷ್ಟಿಯಾಗಿತ್ತು. ಇದೀಗ ರಾಜ್ಯ, ಕೇಂದ್ರ, ನ್ಯಾಯಾಲಯ ಕಂಬಳಕ್ಕೆ ಅನುವು ಮಾಡಿಕೊಟ್ಟಿದೆ. ಯಜಮಾನನ ಸ್ವಾಭಿಮಾನವನ್ನು ಉಳಿಸುವಲ್ಲಿ ಕೋಣಗಳು ಸ್ಪರ್ಧೆ ನಡೆಸುತ್ತವೆ. ಇಂತಹ ವೀರಕ್ರೀಡೆ ನಿರಂತರವಾಗಿ ನಡೆಯಬೇಕು ಎಂದರು.
ಎಂಎಲ್‌ಸಿ ಐವನ್ ಡಿಸೋಜಾ ಮಾತನಾಡಿ, ಕಂಬಳ ಉಳಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ನಡೆಯಬೇಕು. ಮರಳಿನ ಸಮಸ್ಯೆಯಿಂದಾಗಿ ಮನೆ, ಕಟ್ಟಡ, ರಸ್ತೆ ಕಾಮಗಾರಿಗಳಿಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರು ಸಭೆ ನಡೆಸಿದ್ದಾರೆ. ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದರು.
ಕ್ರೀಡಾ ಸಾಧಕಿ ಕನ್ನಿಕಾ ಅಡಪ, ಕಂಬಳದ ಸುಧಾಕರ್ ಶೆಟ್ಟಿ ಮೊಗೆರೋಡಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ನಾಯಕ ನಟರಾದ ನಿರೂಪ್ ಭಂಡಾರಿ, ರಘುನಂದನ್ ವಿಶೇಷ ಆಕರ್ಷಣೆಯಾಗಿದ್ದರು. ಎಂಎಲ್‌ಸಿ ಪ್ರತಾಪಚಂದ್ರ ಶೆಟ್ಟಿ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ರೈ ಕೆ.ಎಸ್, ಜಯಕರ್ನಾಟಕ ಪುತ್ತೂರು ತಾಲೂಕು ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಐಕಳಬಾವ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಪುತ್ತೂರು ಮಾದೆ ದೇವುಸ್ ಚರ್ಚ್ ಧರ್ಮಗುರು ರೆ.ಫಾ.ಆಲ್ಫ್ರೆಡ್ ಜೆ. ಪಿಂಟೋ, ಫಾ.ರಿತೇಶ್, ದರ್ಬೆ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೇರೊ, ಉದ್ಯಮಿ ಎನ್.ಕರುಣಾಕರ ರೈ, ಅಜಿತ್ ಶೆಟ್ಟಿ, ರವಿ ಕಕ್ಕೆಪದವು, ಜಯಕರ್ನಾಟಕ ಮಹಿಳಾ ವಿಭಾಗದ ಪುತ್ತೂರು ಅಧ್ಯಕ್ಷೆ ಜೊಹರಾ ನಿಸಾರ್, ಕೆಪಿಸಿಸಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಪೋಟೋ: ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಮಾತನಾಡಿದರು