×
Ad

ಬೀದಿ ಕಾಮಣ್ಣನನ್ನು ಹಿಗ್ಗಾಮುಗ್ಗಾ ಥಳಿಸಿದ ಕರಾಟೆ ಸೋದರಿಯರು

Update: 2016-03-07 21:39 IST

ಲಾಲಗಂಜ್,ಮಾ.7: ವೈಶಾಲಿ ಜಿಲ್ಲೆಯ ಲಾಲಗಂಜ್‌ನಲ್ಲಿ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಸೋದರಿಯರಿಬ್ಬರನ್ನು ಚುಡಾಯಿಸಿದ ಹದಿಹರೆಯದ ಯುವಕನೋರ್ವ ಜೀವನದಲ್ಲೆಂದೂ ಮರೆಯದ ಪಾಠವನ್ನು ಕಲಿತಿದ್ದಾನೆ. ಸರಕಾರಿ ಪ್ರೌಢಶಾಲೆಯಿಂದ ಹೊರಬೀಳುವಾಗಲೇ ಆತ್ಮರಕ್ಷಣೆಗಾಗಿ ಕರಾಟೆಯ ಒಂದೆರಡು ಪಾಠಗಳನ್ನು ಕಲಿತುಕೊಂಡಿದ್ದ ಈ ಸೋದರಿಯರು ಯುವಕನಿಗೆ ಯಾವ ಪರಿ ಥಳಿಸಿದ್ದರೆಂದರೆ ಆತ ಅವರ ಕಾಲುಗಳಿಗೆ ಬಿದ್ದು ದಯಾಭಿಕ್ಷೆಯನ್ನು ಬೇಡಿದ್ದಲ್ಲದೆ, ಸೋದರಿಯರೇ ಎಂದು ಕರೆಯಲೂ ಆರಂಭಿಸಿದ್ದಾನೆ.
 ತಮ್ಮನ್ನು ಚುಡಾಯಿಸುವವರನ್ನು ಎದುರಿಸಲು ಸಾಧ್ಯವಾಗುವಂತೆ ಶಾಲಾ ಬಾಲಕಿಯರಿಗೆ ಕರಾಟೆ ಕಲಿಸುವಂತೆ ನಿರ್ದೇಶ ನೀಡಿದ್ದಕ್ಕಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಅವರಿಗೆ ತಾವು ಆಭಾರಿಯಾಗಿದ್ದೇವೆಂದು ಈ ಬಾಲಿಕೆಯರ ಹೆತ್ತವರು ಹೇಳಿದ್ದಾರೆ.
 ಕೋಮಲ್ ಮತ್ತು ಕಂಚನ್ ತಮ್ಮ ಸೈಕಲ್‌ಗಳಲ್ಲಿ ಕಾಲೇಜಿನಿಂದ ಮನೆಗೆ ವಾಪಸಾಗುತ್ತಿದ್ದಾಗ 17ರ ಹರೆಯದ ಯವಕ ಅವರನ್ನು ಮಧ್ಯರಸ್ತೆಯಲ್ಲಿ ತಡೆದು ನಿಲ್ಲಿಸಿ ಕಂಚನ್‌ಳ ಕೈ ಹಿಡಿದೆಳೆದಿದ್ದ. ಕುಪಿತ ಕೋಮಲ್ ತನ್ನ ಸೈಕಲ್‌ನಿಂದ ಕೆಳಗಿಳಿದವಳೇ ಆತನ ಮೂಗಿಗೇ ಗುದ್ದಿದ್ದಳು. ಬಲವಾದ ಏಟಿನಿಂದ ಮೂಗು ಒಡೆದು ರಕ್ತ ಸುರಿಯತೊಡಗಿದ್ದರೂ ಆತ ಆಕೆಯ ಮೇಲೆ ಪ್ರತಿದಾಳಿಗೆ ಮುಂದಾಗಿದ್ದ. ಆದರೆ ಅದಕ್ಕೂ ಮುನ್ನವೇ ಕೋಮಲ್ ನೀಡಿದ್ದ ಇನ್ನೊಂದು ಪಂಚ್‌ನಿಂದ ಧರಾಶಾಯಿಯಾಗಿದ್ದ.ಈ ಬೀದಿ ಕಾಮಣ್ಣನನ್ನು ಥಳಿಸುವಲ್ಲಿ ಕಂಚನ್ ಕೂಡ ಹಿಂದೆ ಬಿದ್ದಿರಲಿಲ್ಲ.
ಸೋದರಿಯರು ಆತನ ಶರ್ಟ್‌ನ ಕಾಲರ್ ಹಿಡಿದು ಪೊಲೀಸ್ ಠಾಣೆಗೆ ಎಳದೊಯ್ದಿದ್ದು ಆತ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ್ದ. ತಪ್ಪಾಯ್ತು,ನನ್ನ ಸೋದರಿಯರೇ ಎಂದೂ ಅಲವತ್ತುಕೊಂಡಿದ್ದ. ಅಂದ ಹಾಗೆ ಭಾರೀ ಜನಸ್ತೋಮ ಈ ಸೋದರಿಯರ ಸಾಹಸಕ್ಕೆ ಸಾಕ್ಷಿಯಾಗಿತ್ತಾದರೂ ಅವರ ನೆರವಿಗೆ ಮಾತ್ರ ಯಾರೂ ಮುಂದೆ ಬಂದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News