×
Ad

ರೊನಾಲ್ಡೊ-ಮೆಸ್ಸಿ ಕುರಿತ ವಾಗ್ವಾದ ಕೊಲೆಯಲ್ಲಿ ಅಂತ್ಯ

Update: 2016-03-07 23:32 IST

ಮುಂಬೈ, ಮಾ.7: ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿಯವರ ಬಗ್ಗೆ ವಾಗ್ವಾದವೊಂದರ ಬಳಿಕ, 34ರ ಹರೆಯದ ನೈಜೀರಿಯದ ಪ್ರಜೆಯೊಬ್ಬನನ್ನು ಕುಡಿತದ ಮತ್ತಿನಲ್ಲಿದ್ದ ಆತನ ರೂಂಮೇಟ್ ಹಾಗೂ ಸಹ ದೇಶವಾಸಿಯೊಬ್ಬ ಇರಿದು ಕೊಂದಿದ್ದಾನೆಂದು ಆರೋಪಿಸಲಾಗಿದೆ.
ಮೃತ ಒಬಿನ್ನಾ ಡುರುಂಚುಕ್ವು ಎಂಬಾತ ಶನಿವಾರ ತನ್ನ 34ನೆ ಹುಟ್ಟುಹಬ್ಬವನ್ನು ನಲಸೋಪಾರ(ಪೂರ್ವ)ದ ಓಸ್ವಾಲ್ ನಗರಿಯ ಮಹೇಶ್ ಬಿಲ್ಡಿಂಗ್‌ನ ತಮ್ಮ ಬಾಡಿಗೆ ಫ್ಲಾಟ್‌ನಲ್ಲಿ ಆಚರಿಸುತ್ತಿದ್ದನು. ಅವನು ಹಾಗೂ ಆರೋಪಿ ಮಿಶೆಲ್ ಚುಕ್ವುಮಾ(22) ಎಂಬಾತ ಅಲ್ಲಿ ಪಾರ್ಟಿ ನಡೆಸುತ್ತಿದ್ದರು. ಸಮಾರಂಭ, ರವಿವಾರ ಬೆಳಗ್ಗೆ 9 ಗಂಟೆಯ ವರೆಗೆ ಮುಂದುವರಿದಿತ್ತು. ಕುಡಿತದ ಮತ್ತಿನಲ್ಲಿದ್ದ ಇಬ್ಬರೂ 3ನೆ ಮಹಡಿಯ ಬಾಲ್ಕನಿಯಲ್ಲಿ ಫುಟ್ಬಾಲ್ ಆಡಲು ನಿರ್ಧರಿಸಿದರು.
ಆಟದ ವೇಳೆ ಅವರಲ್ಲಿ ರೊನಾಲ್ಡೊ ಉತ್ತಮ ಆಟಗಾರನೋ ಅಥವಾ ಮೆಸ್ಸಿಯೋ ಎಂಬ ಬಗ್ಗೆ ಚರ್ಚೆ ಆರಂಭವಾಯಿತು. ಒಬಿನ್ನಾ ಮದ್ಯದ ಖಾಲಿ ಬಾಟಲೊಂದನ್ನು ಮಿಶೆಲ್‌ನತ್ತ ಎಸೆದಾಗ ಚರ್ಚೆ ಕೆಟ್ಟ ರೂಪ ಪಡೆಯಿತು.ಬಾಟಲ್ ಮಿಶೆಲ್‌ಗೆ ತಾಗದೆ ಗೋಡೆಗಪ್ಪಳಿಸಿ ಒಡೆದು ಹೋಯಿತು. ಆಗ ಮಿಶೆಲ್ ಬಾಟಲ್‌ನ ಚೂರೊಂದನ್ನು ಹೆಕ್ಕಿ ಒಬಿನ್ನಾನ ಕುತ್ತಿಗೆಗೆ ಬೀಸಿದನು. ಆತ ಸ್ಥಳದಲ್ಲೇ ಸಾವಿಗೀಡಾದನು.

 ಬೊಬ್ಬೆ ಕೇಳಿದ ನೆರೆಯವರು ಟುಲಿಂಗ್ ಠಾಣೆಯ ಪೊಲೀಸರನ್ನು ಎಚ್ಚರಿಸಿದರು. ಆ ವೇಳೆ ಮಿಶೆಲ್ 4ನೆ ಮಹಡಿಗೆ ಓಡಿದ್ದನು. ಅಲ್ಲಿಂದ ಆತನನ್ನು ಬಂಧಿಸಲಾಯಿತು. ಒಬಿನ್ನಾ ಹಾಗೂ ಮಿಶೆಲ್‌ರಿಬ್ಬರ ಪಾಸ್‌ಪೋರ್ಟ್‌ಗಳ ಅವಧಿ ಈ ವರ್ಷ ಮುಗಿದಿದ್ದು, ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದರೆಂದು ಟುಲಿಂಗ್‌ನ ಪೊಲೀಸರು ತಿಳಿಸಿದ್ದಾರೆ.
ಒಬಿನ್ನಾನ ಪಾಸ್‌ಪೋರ್ಟ್‌ನ ಅವಧಿ ಜ.24ಕ್ಕೆ ಮುಕ್ತಾಯಗೊಂಡಿದ್ದರೆ, ಮಿಶೆಲ್‌ನ ಪಾಸ್‌ಪೋರ್ಟ್‌ನ ಅವಧಿ ರವಿವಾರಕ್ಕೆ ಕೊನೆಗೊಂಡಿದೆ. ಆರೋಪಿಯನ್ನು ಸೋಮವಾರ ವಸಾಯಿಯ ನ್ಯಾಯಾಲಯವೊಂದಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News