ವೆನ್ಲಾಕ್ ಉಸ್ತುವಾರಿ ಕೆಎಂಸಿಗೆ ವಹಿಸಿದರೆ ಸರಕಾರಿ ಮೆಡಿಕಲ್ ಕಾಲೇಜು ಕೈತಪ್ಪಲಿದೆ: ಸಚಿವ ಖಾದರ್
ಮಂಗಳೂರು, ಮಾ.7: ದ.ಕ. ಜಿಲ್ಲಾಸ್ಪತ್ರೆಯಾಗಿರುವ ವೆನ್ಲಾಕ್‌ನ ನಿರ್ವಹಣೆಯನ್ನು ಕೆಎಂಸಿಗೆ ವಹಿಸಿದರೆ ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ತೊಡಕಾಗಿ ಪರಿಣಮಿಸಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ವೆನ್ಲಾಕ್ ಆಸ್ಪತ್ರೆಯ ನಿರ್ವಹಣೆಯನ್ನು ಕೆಎಂಸಿಗೆ ನೀಡುವ ಕುರಿತಂತೆ ಇರುವ ಪ್ರಸ್ತಾಪದ ಕುರಿತು ಮಾತನಾಡಿದ ಸಚಿವರು, ರಾಜ್ಯ ಸರಕಾರವು ವೆನ್ಲಾಕ್ ಆಸ್ಪತ್ರೆ ಮತ್ತು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದೆ. ಇದಕ್ಕೂ ಮೊದಲು ಈಗಾಗಲೇ ಮಂಜೂರುಗೊಂಡಿರುವ 6 ಮೆಡಿಕಲ್ ಕಾಲೇಜುಗಳ ಕಾರ್ಯ ಕೈಗೆತ್ತಿಕೊಳ್ಳಲಿದೆ. ಬಳಿಕ ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಈ ನಡುವೆ ವೆನ್ಲಾಕ್ ಆಸ್ಪತ್ರೆಯನ್ನು 30 ವರ್ಷಗಳ ಕಾಲ ಕೆಎಂಸಿ ನಿರ್ವಹಣೆಗೆ ನೀಡಲು ಮುಂದಾದಲ್ಲಿ ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ತೊಡಕಾಗುವ ಸಾಧ್ಯತೆಯಿದೆ. ಆದುದರಿಂದ ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಖಾದರ್ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಯನ್ನು ನಿರ್ವ ಹಿಸುತ್ತಿರುವ ಕೆಎಂಸಿ ಉತ್ತಮ ಕೆಲಸ ಮಾಡಿದೆ. ಆದರೆ 30 ವರ್ಷ ಗಳ ಕಾಲ ಅವರ ನಿರ್ವಹಣೆಗೆ ನೀಡಿದ್ದೇ ಆದಲ್ಲಿ ಸಮಸ್ಯೆಯಾಗಲಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಸದ್ಯ ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಜಿಲ್ಲೆಯ ಒಂದು ತಾಲೂಕಿನಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗಿದೆ. ಮುಂದೆ ಎಲ್ಲ ತಾಲೂಕು ಕೇಂದ್ರಗಳಲ್ಲ್ಲೂ ಡಯಾಲಿಸಿಸ್ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.