×
Ad

ಮೂಡುಬಿದಿರೆಯಲ್ಲಿ ಸದಾನಂದ ಹೆಗಡೆಕಟ್ಟೆ ಅವರಿಗೆ 80ರ ಸಂಭ್ರಮ

Update: 2016-03-08 16:45 IST

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ನಿವೃತ್ತ ಗ್ರಂಥಪಾಲಕ, ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರ 80ನೇ ಜನ್ಮದಿನಾಚರರಣೆಯ ಸಂಭ್ರಮವನ್ನು ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘ , ಪ್ರೆಸ್ ಕ್ಲಬ್ ಮೂಡುಬಿದಿರೆ ವತಿಯಿಂದ ಎಂ.ಸಿ.ಎಸ್. ಬ್ಯಾಂಕಿನ ಸಭಾಂಗಣದಲ್ಲಿ ರವಿವಾರ ಜರಗಿತು.  ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ರೇಮಂಡ್ ತಾಕೋಡೆ ಅಧ್ಯಕ್ಷತೆಯಲ್ಲಿ  ಸದಾನಂದ ಹೆಗಡೆಕಟ್ಟೆ ಪ್ರೇಮಾ ದಂಪತಿಯನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸಮ್ಮಾನಿಸಲಾಯಿತು. ದೀಪ ಪ್ರಜ್ವಲನದ ಮೂಲಕ ಹುಟ್ಟು ಹಬ್ಬದ ಸಂಭ್ರಮಕ್ಕೆ ಹೆಗಡೆಕಟ್ಟೆಯವರ ಮೂಲಕವೇ ಚಾಲನೆ ನೀಡಿ ಪೇಟ, ಶಾಲು,ಹಾರ,ರಜತ ಸ್ಮರಣಿಕೆಗಳೊಂದಿಗೆ ಹೆಗಡೆಕಟ್ಟೆಯವರನ್ನು ಗೌರವಿಸಲಾಯಿತು.  ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಶುಭ ಹಾರೈಸಿದರು.  

ಸಚಿವ ಅಭಯಚಂದ್ರ ಜೈನ್, ಎಂ.ಸಿ.ಎಸ್.ಬ್ಯಾಂಕ್‌ನ ಅಧ್ಯಕ್ಷರಾಗಿ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಪರವಾಗಿ ಪ್ರಾಧ್ಯಾಪಕ ವೇಣುಗೋಪಾಲ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್ ಮತ್ತಿತರರು ಹೆಗಡೆಕಟ್ಟೆಯವರನ್ನು ಗೌರವಿಸಿದರು. ಎಂ.ಸಿ.ಎಸ್. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಜಯಂತಿ ಎಸ್. ಬಂಗೇರ, ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿ ಸದಾನಂದ ನಾರಾವಿ, ನ್ಯಾಯವಾದಿ ಕೆ.ಆರ್.ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು. ಸದಾನಂದ ಹೆಗಡೆಕಟ್ಟೆಯವರು ಮಾತನಾಡಿ ಪ್ರಾಮಾಣಿಕತೆಯ ಕೊರತೆ, ಮಹಿಳಾ ಸಮಾನತೆ ರಾಷ್ಟ್ರೀಯ ಪ್ರಗತಿಗೆ ಅಡ್ಡಿಯಾಗಿದೆ. ಪತ್ರಕರ್ತರು ಜವಾಬ್ದಾರಿಯ ಸ್ಥಾನದಲ್ಲಿದ್ದು ನೈತಿಕತೆ, ಮತ್ತು ಪ್ರಾಮಾಣಿಕತೆಯಿಂದ ಪ್ರಗತಿಗೆ ನಾಂದಿಯಾಗಬೇಕು ಎಂದರು.

 ವಿಶ್ರಾಂತ ಹಿರಿಯ ಪತ್ರಕರ್ತ ಗೋವರ್ಧನ ಹೊಸಮನಿ ಅಭಿನಂದನಾ ಮಾತುಗಳನ್ನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಗಣೇಶ್ ಕಾಮತ್ ಮೂಡುಬಿದಿರೆ ಕಾಯಕ್ರಮ ನಿರೂಪಿಸಿದರು. ಪತ್ರಕರ್ತ ಧನಂಜಯ ಮೂಡುಬಿದಿರೆ ಶುಭಾಶಂಸನೆಗೈದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಸ್ವಾಗತಿಸಿದರು. ಬಿ,ಕೆ. ಅಶ್ರಫ್ ವಾಲ್ಪಾಡಿ ವಂದಿಸಿದರು.

ನವಭಾರತ.... ಹೆಗಡೆಕಟ್ಟೆ
ಅದು 1969ರ ಸಮಯ ಧಾರವಾಡದಲ್ಲಿದ್ದ ಸದಾನಂದ ಹೆಗಡೆಕಟ್ಟೆಯವರಿಗೆ ಕರಾವಳಿಯ ಮಂಗಳೂರು ಮೂಲದ ’ನವಭಾರತ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿ ಮೂಡುಬಿದಿರೆಯ ಮಹಾವೀರ ಕಾಲೇಜಿಗೆ ಬಂದು ಸೇರಿದ್ದರು. ಮಂಗಳೂರಿನ ಪತ್ರಿಕೆಯೊಂದು ಹೆಗಡೆಕಟ್ಟೆಯವರನ್ನು ಇತ್ತ ಸೆಳೆದು ಕೊನೆಗೆ ಅವರನ್ನೂ ಓರ್ವ ಲೇಖಕ,ಪತ್ರಕರ್ತನನ್ನಾಗಿಸಿತು ಎನ್ನುವುದನ್ನು ಹೆಗಡೆಕಟ್ಟೆ ನೆನಪಿಸಿಕೊಂಡರು.
ಅವರ ಎಂಭತ್ತರ ಈ ಸಂಭ್ರಮದಲ್ಲಿ ಸಿಹಿತಿಂಡಿಗಳ ಒಲವಿಗೆ ಪೂರಕವಾಗಿ 80 ಬಗೆಯ ಸಿಹಿ ತಿಂಡಿಗಳ ಮೂಲಕ ಗಮನ ಸೆಳೆದದ್ದು ಮೂಡುಬಿದಿರೆಯ ’ನವಭಾರತ’ ಸ್ವೀಟ್ಸ್!
ಉಳಿದಂತೆ ಟೈಮ್ಸ್ ಆಫ್ ಬೆದ್ರ ಪತ್ರಿಕೆಯ ಹೆಗಡೆಕಟ್ಟೆ ಕುರಿತಾದ ವಿಶೇಷ ಸಂಚಿಕೆ, ’ಪ್ರೀತಿ’ಯ ಶುಭಾಶಯ ಕ್ಯಾಲೆಂಡರ್‌ಗಳ ಅನಾವರಣ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News