ಬೆಳ್ತಂಗಡಿ: ಓಡಿಲ್ನಾಳದಲ್ಲಿ ದಫನಭೂಮಿ ಮಂಜೂರಾತಿ ವಿರುದ್ಧ ಪ್ರತಿಭಟನೆ
ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಶ್ರೀರಾಮನಗರ ಮೈರಳಿಕೆ ಎಂಬಲ್ಲಿ ಮುಸ್ಲಿಂಮರಿಗೆ ದಫನಭೂಮಿ ಮಂಜೂರಾತಿ ಮಾಡುವುದನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ನೇತ್ರತ್ವದಲ್ಲಿ ಮಂಗಳವಾರ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಓಡಿಲ್ನಾಳ ಗ್ರಾಮದ ಮ್ಯರಳಿಕೆ ಎಂಬಲ್ಲಿ ಸರ್ವೇ ನಂಬ್ರ 109/1ಪಿ2ರಲ್ಲಿ 1.78 ಎಕ್ರೆ ಸ್ಥಳವನ್ನು ದಫನಭೂಮಿ ಮಂಜೂರು ಮಾಡಲು ಕಂದಾಯ ಇಲಾಖೆಯಲ್ಲಿ ಕಡತ ಪ್ರಗತಿಯಲ್ಲಿ ಈ ಪ್ರದೇಶದ ಪಕ್ಕದಲ್ಲಿ ಪುರಾತನವಾದ ಶ್ರೀಮಹಾದೇವ ದೇವಸ್ಥಾನದ ಕುರುಹುಗಳಿದೆ. ಅಲ್ಲದೆ ಕುವೆಟ್ಟು ಗ್ರಾಮ ಪಂಚಾಯತ್ ಇಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಜಾಗ ಕಾದಿರಿಸಿದೆ. ಆದರೆ ಕಂದಾಯ ಇಲಾಖೆಯವರು ಒತ್ತಡಕ್ಕೆ ಒಳಗಾಗಿ ದಫನಭೂಮಿಗೆ ಜಾಗ ಮಂಜೂರು ಮಾಡುವ ಯತ್ನದಲ್ಲಿದ್ದು, ಕೂಡಲೇ ಈ ಕಡತವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು. ಬೆಳ್ತಂಗಡಿ ತಹಸೀಲ್ದಾರ್ ಪ್ರಸನ್ನಮೂರ್ತಿ ಅವರ ಮೂಲಕ ದಫನಭೂಮಿ ಮಂಜೂರಾತಿ ಪ್ರಸ್ತಾಪವನ್ನು ಕೈಬಿಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಎಂ.ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಸುಧೀರ್ ಆರ್.ಸುವರ್ಣ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ರಂಜನ್ ಜಿ.ಗೌಡ, ವಿಶ್ವಹಿಂದೂಪರಿಷತ್ ಅಧ್ಯಕ್ಷ ತಾರನಾಥ್, ಕಾರ್ಯದರ್ಶಿ ನವೀನ್, ಭಜರಂಗದಳ ಸಂಚಾಲಕ ದಿನೇಶ್ ಮುಗುಳಿ, ಧರ್ಮಜಾಗರಣದ ದಿನಕರ್ ಆದೇಲು ಇದ್ದರು.