ತೋಡಾರ್; ಅಭಿನಂದನಾ ಸಮಾರಂಭದಲ್ಲಿ ಶೈಖುನಾ ಆಲಿಕುಟ್ಟಿ ಉಸ್ತಾದ್
ಮೂಡುಬಿದಿರೆ: ಸಮಸ್ತವು ಸಾತ್ವಿಕರಾದ ಪೂರ್ವಿಕ ಉಲಮಾಗಳು ಕಟ್ಟಿಬೆಳೆಸಿದ ಸಂಘಟನೆಯಾಗಿದ್ದು,ಉನ್ನತವಾದ ನೇತೃತ್ವ ಪರಂಪರೆ ಈ ಸಂಘಟನೆಗಿದೆ.ಅಲ್ಲಾಹನ ಭಯದೊಂದಿಗೆ ಯಾವುದೇ ರೀತಿಯ ಲೌಕಿಕ ಲಾಲಸೆಗಳಿಲ್ಲದೆ ಈ ಸಂಘಟನೆಯನ್ನು ಬೆಳೆಸಿದ ಪೂರ್ವಕಾಲ ನಾಯಕರ ಪರಿಶ್ರಮದ ಫಲವಾಗಿ ಇಂದು ಸಮಸ್ತವು ಇಷ್ಟು ಸದೃಢವಾಗಿ ಬೆಳೆದಿದೆ.ಇದುವರೆಗೂ ಸಾಗಿ ಬಂದ ಹಾದಿಯಲ್ಲೇ ಇದರ ಪ್ರಯಾಣವನ್ನು ನಾವು ಮುಂದುವರೆಸಬೇಕಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ನೂತನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ಹೇಳಿದರು.
ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜು ಎಸ್ ಕೆ ಎಸ್ ಎಸ್ ಎಫ್ ಮೂಡುಬಿದಿರೆ ವಲಯ ಮತ್ತು ಕೈಕಂಬ ಕ್ಲಸ್ಟರ್‌ಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಅರೆಬಿಕ್ ಕಾಲೇಜು, ಮೂಡಬಿದಿರೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್, ಎಸ್ ಕೆ ಎಸ್ ಎಸ್ ಎಫ್ ಮೂಡಬಿದಿರೆ ವಲಯ,ಎಸ್ ಕೆ ಎಸ್ ಎಸ್ ಎಫ್ ತೋಡಾರು ಶಂಸುಲ್ ಉಲಮಾ ನಗರ ಶಾಖೆ, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಹಂಡೇಲು, ಶಂಸುಲ್ ಉಲಮಾ ಚಾರಿಟೇಬಲ್ ಎಜ್ಯುಕೇಶನ್ ಟ್ರಸ್ಟ್ ಉಳ್ಳಾಲ, ಅಲ್ ಅನ್ಸಾರ್ ಯೂತ್ ಫೆಡರೇಶನ್ ತೋಡಾರು, ಫತಹ್ ಗೈಸ್ ತೋಡಾರು, ಅಲ್ ಇಹ್ಸಾನ್ ಬಾಯ್ಸಾ ತೋಡಾರು ಮತ್ತು ಅಟೊ ಗ್ರೂಪ್ ತೋಡಾರು ಮುಂತಾದ ಸಂಘಟನೆಗಳ ವತಿಯಿಂದ ಶೈಖುನಾ ಆಲಿ ಕುಟ್ಟಿ ಉಸ್ತಾದರನ್ನು ಅಭಿನಂದಿಸಲಾಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಕೆ ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅಧ್ಯಕ್ಷತೆ ವಹಿಸಿದ್ದರು. ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಕಾರ್ಯಾಧ್ಯಕ್ಷರಾದ ಕೆ ಎಂ ಉಸ್ಮಾನುಲ್ ಫೈಝಿ ಉಸ್ತಾದರು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ ಅವರು ಪ್ರಾಸ್ತಾವಿಕ ಭಾಷಣ ನಡೆಸಿದರು. ಪ್ರಸಿದ್ದವಾಗ್ಮಿ ಹಾಶಿಂ ಅರಿಯಿಲ್ ರವರು ಮುಖ್ಯ ಪ್ರಭಾಷಣ ನಡೆಸಿದರು. ಸಮಾರಂಭದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಎಸ್.ಕೆ.ಎಸ್.ಎಸ್.ಎಫ್‌ನ ನೂತನ ಅಧ್ಯಕ್ಷರಾಗಿ ಅನೀಸ್ ಕೌಸರಿಯನ್ನು ಶೈಖುನಾ ಆಲಿಕುಟ್ಟಿ ಉಸ್ತಾದ್ ಶಾಲು ಹೊದಿಸಿ ಅಭಿನಂದಿಸಿದರು. ಎಸ್.ಕೆ.ಎಸ್.ಎಸ್.ಎಫ್ ತೋಡಾರು ಶಾಖೆಯ ವತಿಯಿಂದ ಅನೀಸ್ ಕೌಸರಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತೋಡಾರು ಜಮಾಅತ್ ಅಧ್ಯಕ್ಷ ಎಮ್.ಎ.ಎಸ್ ಅಬೂಬಕ್ಕರ್ ಹಾಜಿ,ವಾರ್ಷಿಕೋತ್ಸವ ಸ್ವಾಗತ ಸಮಿತಿಯ ಸಂಚಾಲಕ ಎಮ್.ಎಚ್ ಮೊಹಿಯದ್ದೀನ್ ಹಾಜಿ,ಕಾಲೇಜು ಉಪ ಪ್ರಾಂಶುಪಾಲ ರಫೀಕ್ ಅಹ್ಮದ್ ಹುದವಿ ಕೋಲಾರ,ಎಚ್.ಎಮ್ ಹಾಜಿ ಹಂಡೇಲು,ನಝೀರ್ ಉಳ್ಳಾಲ್, ಸಂಸ್ಥೆಯ ವರ್ಕಿಂಗ್ ಕಾರ್ಯದರ್ಶಿ ಬಿ ಎಂ ಇಸ್ಹಾಕ್ ಹಾಜಿ ಮುಂತಾದವರು ಉಪಸ್ಥಿತರಿದ್ದರು. ನಝೀರ್ ಫೈಝಿ ತೋಡಾರು ಸ್ವಾಗತಿಸಿದರು.ವಿದ್ಯಾರ್ಥಿ ಸ್ವಾಬಿರ್ ನಿರೂಪಿಸಿದರು.
ಸಮಸ್ತದ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಪ್ರಥಮ ಬಾರಿಗೆ ಆಗಮಿಸಿದ ಶೈಖುನಾ ಆಲಿಕುಟ್ಟಿ ಉಸ್ತಾದರನ್ನು ಬೃಹತ್ ವಾಹನ ರ್ಯಾಲಿಯ ಮೂಲಕ ಬರಮಾಡಿಕೊಳ್ಳಲಾಯಿತು.ಧೂಮಚಡವು ಜಂಕ್ಷನ್‌ನಿಂದ ಪ್ರಾರಂಭಗೊಂಡ ವಾಹನ ರ್ಯಾಲಿಯಲ್ಲಿ ಕೈಕಂಬ,ತೋಡಾರು ಮತ್ತು ಮೂಡಬಿದಿರೆ ಪರಿಸರದ ನೂರಾರು ಮಂದಿ ಸಮಸ್ತದ ಧ್ವಜಧಾರಿ ವಾಹನಗಳೊದಿಗೆ ಭಾಗವಹಿಸಿದರು.