ಪುತ್ತೂರು : ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ

Update: 2016-03-08 12:00 GMT
ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡುತ್ತಿರುವುದು

 ಪುತ್ತೂರು: ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಿಂದ ಮುಂದಿನ ವಿಧಾನಸಭೆ ಚುನಾವಣೆಯ ಸ್ಪಷ್ಟ ದಿಕ್ಸೂಚಿಯಾಗಿದ್ದು, ತಮಗೆ ಸಿಕ್ಕಿರುವ ಸೇವಾ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಸುನೀಲ್ ಕುಮಾರ್ ನೂತನ ತಾ.ಪಂ, ಜಿ.ಪಂ ಸದಸ್ಯರಿಗೆ ಹೇಳಿದರು.

ಅವರು ಮಂಗಳವಾರ ಪುತ್ತೂರು ಜೈನ ಭವನದಲ್ಲಿ ನಡೆದ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರು, ರೈತರು ಬಿಜೆಪಿ ಪರವಾಗಿರುವುದನ್ನು ಈ ಬಾರಿಯ ಫಲಿತಾಂಶ ಹೊರಹಾಕಿದೆ. ರಾಜ್ಯ ಕಾಂಗ್ರೆಸ್ ಗ್ರಾಮೀಣಾಭಿವೃದ್ಧಿಗೆ ಏನನ್ನೂ ನೀಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ನೀಡಿರುವ ಒತ್ತನ್ನು ಜನ ಮರೆತಿಲ್ಲ. ಆದ್ದರಿಂದ ಇದೀಗ ನಮ್ಮ ಜವಾಬ್ದಾರಿ ಹೆಚ್ಚಿದೆ. ಮುಂದಿನ ಎರಡು ವರ್ಷದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯ ನಡೆಸುವಂತೆ ಅವರು ತಿಳಿಸಿದರು.

ರೇಷನ್ ಕಾರ್ಡ್, ಎತ್ತಿನಹೊಳೆ, 9/11 ನಿಯಮಾವಳಿ, ಮರಳು ಸಮಸ್ಯೆ, ಕಾನೂನು ಸುವ್ಯವಸ್ಥೆ ಕಾಂಗ್ರೆಸ್ ಆಡಳಿತದಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ, ಮೋದಿ ವಿರುದ್ಧ ಹೇಳಿಕೆ ನೀಡುವುದು, ಜೆಎನ್‌ಯುನಲ್ಲಿ ನಡೆದ ಚಳವಳಿಗೆ ಬೆಂಬಲ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶ ವಿರೋಧಿ ಶಕ್ತಿಗಳು ಒಂದಾಗುತ್ತಿವೆ. ದೇಶ ವಿರೋಧಿ ಹೇಳಿಕೆ ನೀಡುವುದು ಫ್ಯಾಷನ್ ಎಂಬಂತಾಗಿದೆ. ಸೈನಿಕರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಅಕ್ರಮ ಗೋ ಸಾಗಾಟ ತಡೆದ ಕಾರ್ಯಕರ್ತರನ್ನು ಗಡಿಪಾರು ಮಾಡಲು ಮುಂದಾಗಿದೆ. ಸಚಿವ ಸಂಪುಟದ 34 ಸಚಿವರು ಸಮಸ್ಯೆ ಪರಿಹಾರಕ್ಕೆ ಪ್ರವಾಸ ನಡೆಸುತ್ತಿಲ್ಲ. ಸಚಿವರು ನಾಲಯಕ್ಕು ಎಂದು ಜನಾರ್ದನ ಪೂಜಾರಿಯವರೇ ಹೇಳಿದ್ದಾರೆ ಎಂದು ಅವರು ದೂರಿದರು. ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ ಮುಂದಿನ ದಿನಗಳಲ್ಲಿ ಗುರುತರ ಅಭಿವೃದ್ಧಿಗೆ ಪೂರಕ ಅವಕಾಶವಿದೆ. ಜಿಪಂ, ತಾಪಂ, ಗ್ರಾಪಂನಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಶೌಚಾಲಯ, ಕುಡಿಯುವ ನೀರು ಮೊದಲಾದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣಕಾಸು ನೀಡಿದೆ. ಇದನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸಂಜೀವ ಮಠಂದೂರು ಮಾತನಾಡಿ 1994ರಲ್ಲಿ ಪುತ್ತೂರಿನಲ್ಲಿ ಬಿಜೆಪಿ 22ರಲ್ಲಿ 21 ಸ್ಥಾನ ಪಡೆದಿತ್ತು. ಜೆಡಿಎಸ್ 1 ಸ್ಥಾನ ಪಡೆದಿತ್ತು. ಆಗಲೇ ಕಾಂಗ್ರೆಸ್ ಮುಕ್ತ ಮಾಡಲಾಗಿದೆ. ಮುಂದಿನ ಎರಡು ವರ್ಷದಲ್ಲಿ ಸವಾಲು ಇದೆ. ಪುತ್ತೂರು ಶಾಸಕತ್ವ ಸಿಗಲು ಹೋರಾಟ ನಡೆಸಬೇಕಿದೆ ಎಂದರು.

ಈ ಸಂದರ್ಭ ತಾಪಂ, ಜಿಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಪುತ್ತೂರು ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಶ್ವೇಶ್ವರ ಭಟ್ ಬಂಗಾರಡ್ಕ, ಜಿಲ್ಲಾ ಸಮಿತಿ ಸದಸ್ಯ ಚನಿಲ ತಿಮ್ಮಪ್ಪ ಶೆಟ್ಟಿ, ವಿಭಾಗ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಸುಳ್ಯ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರದಾನ ಕಾರ್ಯದರ್ಶಿ ರಾಕೇಶ್ ಕೆಡೆಂಜಿ, ತಾಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಮತ್ತಿತರರರು ಉಪಸ್ಥಿತರಿದ್ದರು.
ಪುತ್ತೂರು ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಶಂಭು ಭಟ್ ಸ್ವಾಗತಿಸಿದರು. ಯುವಮೋರ್ಚಾ ಕಾರ್ಯದರ್ಶಿ ಸುನಿಲ್ ದಡ್ಡು ವಂದಿಸಿದರು. ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News