ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ-ಶಹನಾಝ್
ಪುತ್ತೂರು: ಮಹಿಳೆಯರು ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಹಿಂದುಳಿದಿರುವುದರಿಂದ ದೇಶದ ಸಿಂಹಪಾಲು ಮಹಿಳೆಯರು ಅನಕ್ಷರಸ್ಥರಾಗಿದ್ದಾರೆ. ಇದನ್ನು ನಿವಾರಿಸಿ ಮಹಿಳಾ ಶಿಕ್ಷಣಕ್ಕೂ ಪ್ರಾಮುಖ್ಯತೆ ನೀಡಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ ಎಂದು ಎನ್.ಡಬ್ಲ್ಯು.ಎಫ್ ಪುತ್ತೂರು ತಾಲೂಕು ಕಾರ್ಯದರ್ಶಿ ಶಹನಾಝ್ ರಝಾಕ್ ಹೇಳಿದರು.
ಅವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.8ರಂದು ಇಲ್ಲಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಪುತ್ತೂರು ಘಟಕದ ವತಿಯಿಂದ ನಡೆದ ಮಹಿಳಾ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಬಡತನ, ಮಹಿಳೆಯರ ಸಾಮಾಜಿಕ ಅಗೌರವ, ಶಿಕ್ಷಣ ಸಂಸ್ಥೆಗಳ ಖಾಸಗೀಕರಣ, ಭಿನ್ನಮತ ಮೊದಲಾದವುಗಳ ಪರಿಣಾಮ ಪ್ರಥಮವಾಗಿ ಬೀರುವುದು ಮಹಿಳೆಯರ ಮೇಲಾಗಿದೆ ಎಂದ ಅವರು ದೇಶ ಅಭಿವೃದ್ಧಿ ಹೊಂದಬೇಕಾದರೆ ಪುರುಷರ ಜೊತೆ ಮಹಿಳೆಯರೂ ಅಭಿವೃದ್ಧಿ ಸಾಧಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಮಹಿಳೆ ಕೇವಲ ಕೌಟುಂಬಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ತಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಸಾಮಾಜಿಕ ಬದಲಾವಣೆ ಮಾಡಬೇಕಾದರೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎನ್‌ಡಬ್ಲ್ಯುಎಫ್ ಸಂಘಟನೆಯು ಸಾಮಾಜಿಕವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಎನ್‌ಡಬ್ಲ್ಯುಎಫ್ ತಾಲೂಕು ಅಧ್ಯಕ್ಷೆ ಆಸಿಫಾ ಅಬೂಬಕ್ಕರ್ ಸಮಯೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಸಮಿತಿ ಸದಸ್ಯರಾದ ಉಮೈಮಾ ಅಶ್ರಫ್, ಸುಮಯ್ಯಾ ಹಮೀದ್ ಸಹಿತ ಹಲವಾರು ಮಂದಿ ಹಾಜರಿದ್ದರು. ಸಫ್ವಾನಾ ಪುತ್ತೂರು ವಂದಿಸಿದರು.