ಸಮಾಜದ ಬದಲಾವಣೆಗೆ ಬೀಜ ಬಿತ್ತೋಣ: ನ್ಯಾಷನಲ್ ವುಮೆನ್ಸ್ ಫ್ರಂಟ್

Update: 2016-03-08 13:12 GMT

ಬೆಳ್ತಂಗಡಿ, ಮಾ.8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಲ್ಲೇರಿಯ ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಬೆಳ್ತಂಗಡಿ ಹಾಗೂ ವುಮೆನ್ಸ್ ಇಂಡಿಯಾ ಮೂವ್‌ಮೆಂಟ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಫರ್ಝಾನಾ ಕೆಮ್ಮಾರ ಮಾತನಾಡಿ, ಹೋರಾಟದ ಹೊರತು ಬದಲಾವಣೆ ತರಲು ಸಾಧ್ಯವಿಲ್ಲ ಎಂಬುವುದನ್ನು ವಿಶ್ವದ ಇತಿಹಾಸವು ನಮಗೆ ಬೋದಿಸುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಸಂತೋಷ, ಆಚರಣೆ, ಉಲ್ಲಾಸದ ದಿನವಾಗಿದೆ. ಸಮಾಜದ ಉನ್ನತಿಗೆ ಹೆಣ್ಣಿನ ಕಲಿಕೆ ಅತೀ ಮುಖ್ಯ. ಹೆಣ್ಣು ಕೇವಲ ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾಗಿರದೆ ಉನ್ನತ ಶಿಕ್ಷಣವನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.

ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಉತ್ತಮ ಸಮಾಜವನ್ನು ಕಾಪಾಡಬಹುದು ನಮ್ಮ ಆರೋಗ್ಯ ನಾವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿದೆ ಎಂದು ಡಾ.ಮುಬೀನಾ ವಿಶ್ಲೇಷಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಲಾಯಿತು. ವೇದಿಕೆಯಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಜಿಲ್ಲಾಧ್ಯಕ್ಷೆ ಯಾಸ್ಮೀನ್, ಎಸ್‌ಡಿಪಿಐ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯೆ ಝರೀನ ಉಪ್ಪಿನಂಗಡಿ, ಮರಿಯಮ್ಮ ಟಿ.ಎಸ್ ಉಪಸ್ಥಿತರಿದ್ದರು. ಸುಮಾರು 150ಕ್ಕೂ ಮಿಕ್ಕಿ ಮಹಿಳೆಯರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News