ವಿದ್ಯಾರ್ಥಿ ಖಾತೆಗೆ ಜಮಾ ಆಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ; ಪಾಲಕರ ಅಳಲು
ಭಟ್ಕಳ: ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡಲ್ಪಡುವ ವಿದ್ಯಾರ್ಥಿ ವೇತನ ಇಲಾಖೆಯಿಂದ ಮಂಜೂರು ಆಗಿದ್ದರೂ ಇದುವರೆಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗದೆ ಫಲಾನುಭವಿ ವಿದ್ಯಾರ್ಥಿಗಳ ಪಾಲಕರು ಬ್ಯಾಂಕಿಗೆ ಮತ್ತು ಶಾಲೆಗೆ ಅಲೆಯುವಂತಾಗಿದೆ.
ಈ ಕುರಿತು ೨೦೧೫-೧೬ ನೇ ಸಾಲಿನ ಪ್ರಿಮೆಟ್ರಿಕ್ ವಿದ್ಯಾರ್ಥಿ ವೇತನ ಮಂಜೂರಿಯಾಗಿರುವ ೧ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಬ್ಯಾಂಕಿನ ಎಲ್ಲ ದಾಖಲೆಗಳನ್ನು ಅರ್ಜಿಸಲ್ಲಿಸುವ ಮುಂಚೆ ನೀಡಿದ್ದಾಗ್ಯೂ ಪಾಲಕರ ಮುಬೈಲ್ ಗೆ ನೀವು ನೀಡಿದ ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲ ಅದನ್ನು ಪರಿಶೀಲಿಸಿ ಎಂಬ ಸಂದೇಶ ಬರುತ್ತಿದ್ದು ಪಾಲಕರು ಬ್ಯಾಂಕಿ ಹೋಗಿ ವಿಚಾರಿಸಲಾಗಿ ನಿಮ್ಮ ಬ್ಯಾಂಕ್ ಖಾತೆ ಚಾಲನೆಯಲ್ಲಿದೆ ಯಾವುದೇ ಹಣ ನಿಮ್ಮ ಮಗುವಿನ ಖಾತೆ ಜಮಾ ಅಗಿಲ್ಲ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇದರಿಂದಾಗಿ ಪಾಲಕರು ಶಾಲೆ ಹಾಗೂ ಬ್ಯಾಂಕಿಗೆ ಅಲೆಯುವಂತಾಗಿದೆ ಎಂಬ ದೂರು ಪಾಲಕರಿಂದ ಕೇಳಿಬರುತ್ತಿದೆ. ಭಟ್ಕಳ ಶಿಕ್ಷಣ ಇಲಾಖೆಯಿಂದ ಈ ಕುರಿತಂತೆ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಹೀಗಾಗಿರಬಹುದು ಎಂಬ ಮಾತು ಶಿಕ್ಷಣ ಇಲಖೆಯಿಂದ ಕೇಳಿ ಬರುತ್ತಿದೆ.
ಒಬ್ಬ ವಿದ್ಯಾರ್ಥಿಗೆ ಒಂದು ಸಾವಿರದಿಂದ ೫ ಸಾವಿರದ ವರೆಗೂ ವಿದ್ಯಾರ್ಥಿ ವೇತನ ಮಂಜೂರು ಆಗಿದ್ದು ಇಲಾಖೆಯ ಅಂತರ್ ಜಾಲದಲ್ಲಿಯೂ ವಿದ್ಯಾರ್ಥಿಗೆ ಸ್ಕಾಲರ್ ಶಿಪ್ ಮಂಜೂರು ಆಗಿದೆ ಎನ್ನುವದನ್ನು ತೋರಿಸಲಾಗುತ್ತಿದ್ದು ಬ್ಯಾಂಕಿಗೆ ಮಾತ್ರ ಹಣ ಜಮೆಯಾಗದಿರುವುದು ಪಾಲಕರಲ್ಲಿ ಅತಂಕಪಡುವಂತಾಗಿದೆ. ಈ ಕುರಿತಂತೆ ಸಂಬಂಧ ಪಟ್ಟ ಇಲಾಖೆ ಕೂಡಲೆ ಕ್ರಮ ಜರಗಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.