ಭಟ್ಕಳ: ಶಿರಾಲಿಯಲ್ಲಿ ರಂಜಿಸಿದ ನೂಪುರೋತ್ಸವ
ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಝೇಂಕಾರ ಆರ್ಟ್ ಅಸೋಸಿಯೇಶನ್(ರಿ.),ಭಟ್ಕಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕಾರವಾರ ಇದರ ಸಹಯೋಗದಲ್ಲಿ ಆಯೋಜಿಸಲಾದ ನೂಪುರೋತ್ಸವ ಕಾರ್ಯಕ್ರಮ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಸಮಾಜ ಸೇವಕ ವಿಷ್ಣು ಶ್ಯಾನಭಾಗ್ ಉದ್ಘಾಟಿಸಿದರು. ನಂತರ ಮಾತನಾಡುತ್ತಾ ಶಿರಾಲಿ ಗ್ರಾಮದಲ್ಲಿ ಇನ್ನಷ್ಟು ಉತ್ತಮ ಕಲಾ ಪ್ರತಿಭೆಗಳು ಹೊರ ಹೊಮ್ಮುವಂತಾಗಲಿ ಎಂದು ಹಾರೈಸಿದರು.ಝೇಂಕಾರ ಕಲಾ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಕ ವೃಂದದವರ ಸಹಕಾರವನ್ನು ಸ್ಮರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಾಮಾ ಮೊಗೇರ ಶಾಸ್ತ್ರೀಯ ಕಲೆಯಲ್ಲಿ ಜನರಿಗೆ ಆಸಕ್ತಿ ಮೂಡಿಸಿ ಅದನ್ನು ಬೆಳೆಸುವ ಕಲಾ ಸಂಸ್ಥೆಯ ಕಾರ್ಯ ಶ್ಲಾಘನಾರ್ಹವಾಗಿದೆ ಎಂದರು.ಡಾ.ಆರ್.ವಿ.ಸರಾಫ್ ಭರತನಾಟ್ಯದ ಉಗಮದ ಬಗ್ಗೆ ವಿವರಿಸಿ ಬಹುಮಾನವನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಶಹನಾಯಿ ಮತ್ತು ಕೊಳಲು ವಾದಕ ವಿನಾಯಕ ದೇವಾಡಿಗ ಇವರನ್ನು ಹಾಗೂ ರಾಜ್ಯ ಮಟ್ಟದಲ್ಲಿ ರ್ಯಾಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಭಾಧ್ಯಕ್ಷರಾದ ಡಿ.ಜೆ.ಕಾಮತ ಶಾಸ್ತ್ರೀಯ ಕಲೆಗಳನ್ನು ಆಸಕ್ತಿಯಿಂದ ಅಭ್ಯಸಿಸಿದರೆ ಮಾತ್ರ ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು. ಪ್ರಾರಂಭದಲ್ಲಿ ರಾಮದಾಸ ದೇವಾಡಿಗ ಸ್ವಾಗತಿಸಿದರು.ಶಿಕ್ಷಕ ಸಂಜಯ ಗುಡಿಗಾರ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ವಿದೂಷಿ ನಯನಾ ಪ್ರಸನ್ನ ನಿರ್ದೇಶನದಲ್ಲಿ ಭರತನಾಟ್ಯ,ವಂಕಟೇಶ ಭಟ್ಟ ನಿರ್ದೇಶನದಲ್ಲಿ ಕರ್ನಾಟಕ ಸಂಗೀತ,ಹಾಗೂ
ಚಿಣ್ಣರ ರಸಮಂಜರಿ ಪ್ರೇಕ್ಷಕರನ್ನು ರಂಜಿಸಿತು.