ಆಹಾರ ಭದ್ರತಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರಧಾನಿಗೆ ಮಹಿಳಾ ಸಂಘಟನೆಗಳ ಪತ್ರ
ಹೊಸದಿಲ್ಲಿ,ಮಾ.8: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ)ಯನ್ನು ತಕ್ಷಣವೇ ಜಾರಿಗೊಳಿಸುವಂತೆ ಆಗ್ರಹಿಸಿ ಹಲವಾರು ಮಹಿಳಾ ಸಂಘಟನೆಗಳು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರವನ್ನು ಬರೆದಿವೆ. ಈ ಯೋಜನೆಯಡಿ ಮಾತೃತ್ವ ಸೌಲಭ್ಯಗಳು ಕನಿಷ್ಠ 200ಕ್ಕೂ ಹೆಚ್ಚಿನ ಆದ್ಯತೆಯ ಜಿಲ್ಲೆಗಳಿಗೆ ವಿಸ್ತರಣೆಗೊಳ್ಳುತ್ತವೆ.
ಎಲ್ಲ ಕ್ಷೇತ್ರಗಳಲ್ಲಿ ಮಾತೃತ್ವ ಸೌಲಭ್ಯಗಳು ಸಾರ್ವತ್ರಿಕ ಮತ್ತು ಶರತ್ತುರಹಿತವಾಗಿರಬೇಕು ಹಾಗೂ ಇವುಗಳನ್ನು ಮಕ್ಕಳ ಸಂಖ್ಯೆ ಅಥವಾ ಮಹಿಳೆಯ ವಯಸ್ಸಿಗೆ ತಳುಕು ಹಾಕಬಾರದು ಎಂದೂ ಅವು ಆಗ್ರಹಿಸಿವೆ.
ಸ್ಥಳೀಯ ಪೂರಕ ಪೌಷ್ಟಿಕ ಆಹಾರವನ್ನು ಎಲ್ಲ ಗರ್ಭಿಣಿಯರು ಮತ್ತು ಹಾಲೂಡಿಸುವ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೂರೈಸಬೇಕು. ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮೂಲಕ ಎನ್‌ಎಫ್‌ಎಸ್‌ಎ ಅಡಿ 10ಕೆ.ಜಿ.ಅಕ್ಕಿ ಅಥವಾ ಗೋಧಿ, ಒಂದು ಕೆ.ಜಿ.ಬೇಳೆಕಾಳುಗಳು ಮತ್ತು ಒಂದು ಕೆಜಿ ಖಾದ್ಯತೈಲವನ್ನು ಒದಗಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.
ಎಲ್ಲ ಮಹಿಳೆಯರಿಗೆ ಕನಿಷ್ಠ ಪ್ರಚಲಿತ ದರಗಳಲ್ಲಿ ಲೆಕ್ಕ ಹಾಕಿ ಸಂಪೂರ್ಣ ವೇತನದೊಂದಿಗೆ ಪ್ರಸವಕ್ಕೆ ಮುನ್ನ ಮೂರು ತಿಂಗಳು ಮತ್ತು ಪ್ರಸವದ ನಂತರ ಆರು ತಿಂಗಳು ಹೀಗೆ ಒಟ್ಟು ಒಂಬತ್ತು ತಿಂಗಳ ರಜೆಯನ್ನು ನೀಡಬೇಕು ಎಂದೂ ಪತ್ರವು ಆಗ್ರಹಿಸಿದೆ.
ಮಾತೃತ್ವ ಆರೋಗ್ಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಮೈತ್ರಿಕೂಟ(ಎನ್‌ಎಎಂಎಚ್‌ಎಚ್‌ಆರ್),ರೈಟ್ ಟು ಫುಡ್ ಕ್ಯಾಂಪೇನ್ ಇತ್ಯಾದಿ ಸಂಘಟನೆಗಳು ಈ ಪತ್ರಕ್ಕೆ ಸಹಿಗಳನ್ನು ಹಾಕಿವೆ.