ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಒಕ್ಟೋವಿಯಾ ಅಲ್ಬುಕರ್ಕ್ ನಿಧನ
ಮಂಗಳೂರು, ಮಾ. 9: ವಿಧಾನ ಪರಿಷತ್‌ನ ಮಾಜಿ ಸದಸ್ಯೆ, ಮಂಗಳೂರು ಗಾಂಧಿ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಒಕ್ಟೋವಿಯಾ ಅಲ್ಬುಕರ್ಕ್ (93) ಇಂದು ಬೆಳಗ್ಗೆ ನಿಧನರಾದರು.
1970 ರಿಂದ 72ರವರೆಗೆ ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯೆಯಾಗಿದ್ದ ಅವರು, ರಾಜಕಾರಣಿಯಾಗಿ ಮಾತ್ರವಲ್ಲದೆ ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕವೂ ತನ್ನನ್ನು ತೊಂಡಗಿಸಿಕೊಂಡವರು.
ಲೇಡೀಸ್ ಸೋಶಿಯಲ್ ಸರ್ವಿಸ್ ಲೀಗ್, ದಿ ಡಯಾಸಿನ್ ಕೌನ್ಸಿಲ್ ಆಫ್ ಕೆಥೊಲಿಕ್ ವುಮೆನ್, ಚೆಶಯರ್ ಹೋಮ್, ಕಾರ್ನಾಡ್ ಸದಾಶಿವ ರಾವ್ ಟ್ರಸ್ಟ್, ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ ಸೇರಿದಂತೆ 62 ಸಂಘಟನೆಗಳಲ್ಲಿ ಸಕ್ರಿಯ ಸದಸ್ಯೆಯಾಗಿ ಗುರುತಿಸಿಕೊಂಡಿದ್ದರು.
ಮಂಗಳೂರು ಮುನ್ಸಿಪಲ್‌ನ ಪ್ರಥಮ ಅಧ್ಯಕ್ಷೆಯಾಗಿದ್ದ ಅವರು, ಮೈಸೂರು ಮಹಾರಾಜ, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮೊದಲಾದವರಿಂದ ಗೌರವವನ್ನೂ ಪಡೆದವರಾಗಿದ್ದಾರೆ.
2016ರ ಫೆಬ್ರವರಿ 20ರಂದು 92ನೆ ಹುಟ್ಟು ಹಬ್ಬವನ್ನು ಕುಟುಂಬ ಸದಸ್ಯರು ಹಾಗೂ ಮೊಮ್ಮಕ್ಕಳು ಹಾಗೂ ಸ್ನೇಹಿತರ ಜತೆ ಆಚರಿಸಿಕೊಂಡಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಸ್ವಾತಂತ್ರ ಚಳವಳಿಯ ಸಂದರ್ಭ ಮಂಗಳೂರಿನಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಒಕ್ಟೋವಿಯಾ ಅವರ ತಂದೆ ಪ್ರಮುಖ ಪಾತ್ರ ವಹಿಸಿದ್ದು, ಅವರು ರಾಜಕೀಯ ಪ್ರವೇಶಕ್ಕೂ ಇದೇ ಪ್ರೇರಣೆ ನೀಡಿತ್ತು. ಸುಮಾರು 40ರಷ್ಟು ಮಹಿಳೆಯರ ಲೇಡೀಸ್ ಸೋಶಿಯಲ್ ಸರ್ವಿಸ್ ಲೀಗ್ ಎಂಬ ಗುಂಪನ್ನು ಆರಂಭಿಸುವ ಮೂಲಕ ಅವರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಕಾಯಿಲೆಯಿಂದ ನರಳುವವರಿಗೆ ಸಹಾಯ ಹಸ್ತ ನೀಡುವ ಕಾರ್ಯವನ್ನು ಮಾಡುತ್ತಿದ್ದರು.
ಮಾರ್ಚ್ 10ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಹೊಯ್ಗೆ ಬಜಾರ್‌ನ ಹಂಚಿನ ಕಾರ್ಖಾನೆ ಆವರಣದ ಸೀ ವ್ಯೆ ಸಮೀಪದ ಅವರ ನಿವಾಸಕ್ಕೆ ತರಲಾಗುವುದು. ಸಂಜೆ 4 ಗಂಟೆಗೆ ರೊಸಾರಿಯೊ ಕೆಥಡ್ರಲ್‌ನಲ್ಲಿ ಅಲ್ಬುಕರ್ಕ್ ಅವರ ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ.