ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಉಳ್ಳಾಲ. ಮಾ, 09: ಸಮಾಜದ ಬೇರೆ-ಬೇರೆ ರಂಗಗಳಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸಿ ಮಾತಾಡುತ್ತಾ ಶಿಕ್ಷಣವು ಮಹಿಳೆಯರ ಸಬಲೀಕರಣದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ ಮಾತ್ರವಲ್ಲ ಅವರನ್ನು ಜವಾಬ್ದಾರಿಯುತ ನಾಗರಿಕರಾಗಿ ಜೀವಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಯೆನೆಪೋಯ ವಿಶ್ವವಿದ್ಯಾನಿಲಯದ ಗೌರಾವಾನ್ವಿತ ಉಪಕುಲಪತಿಗಳಾದ ಡಾ. ಎಮ್. ವಿಜಯಕುಮಾರ್‌ರವರು ಅಭಿಪ್ರಾಯಪಟರು.
ಅವರು ಮಂಗಳವಾರ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಯೆನೆಪೋಯ ವಿಶ್ವವಿದ್ಯಾನಿಲಯದ ವೈದ್ಯಕೀಯ ಸಮಾಜ ಕಾರ್ಯ ವಿಭಾಗವು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯಾಗಿರುವ ಡಾ. ಮಹಮ್ಮದ್ ಅಮೀನ್ ವಾಣಿ ಮಾತನಾಡಿ, ಸಮಾಜದಲ್ಲಿ ತಾಯಿಯಾಗಿ, ಸಹೋದರಿಯಾಗಿ ಮತ್ತು ಪತ್ನಿಯಾಗಿ ಮಹಿಳೆಯು ವಹಿಸುತ್ತಿರುವ ಮೂರು ಮುಖ್ಯ ಪಾತ್ರಗಳನ್ನು ಗುರುತಿಸಿ ಇನ್ನೂ ಕೂಡಾ ಮಹಿಳೆಯು ರಾಜಕೀಯ ಹಾಗೂ ಧಾರ್ಮಿಕ ರಂಗಗಳಲ್ಲಿ ಸಬಲೀಕರಣವನ್ನು ಸಾದಿಸಲಿಕ್ಕಿದೆ ಎಂದು ಹೇಳಿ ಹೆಚ್ಚು ಸರ್ವರೂ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಿದಲ್ಲಿ ಮಹಿಳಾ ದಿನಾಚರಣೆಯ ಗುರಿ ಈಡೇರುತ್ತದೆ ಎಂದು ಅಭಿಪ್ರಾಯ ಪಟ್ಟರು. ಹಾಗೆಯೇ ಅವರು ಯೆನೆಪೊಯ ವಿಶ್ವವಿದ್ಯಾನಿಲಯ ಹಾಗೂ ಅದರ ಅಧೀನ ಶಿಕ್ಷಣ ಹಾಗೂ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಶೇಕಡಾ 50 ಕ್ಕಿಂತಲೂ ಮಿಕ್ಕಿ ಮಹಿಳೆಯರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತು ಶೇಕಡಾ 65 ಮಹಿಳಾ ವಿದ್ಯಾರ್ಥಿಗಳು ವೃತ್ತಿಪರ ವ್ಯಾಸಂಗದಲ್ಲಿ ತೊಡಗಿರುವ ಬಗ್ಗೆ ಶ್ಲಾಘಿಸಿದರು.
ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ಸಂದೇಶ ನೀಡಿದ ಯೆನೆಪೋಯ ಮೆಡಿಕಲ್ ಕಾಲೇಜಿನ ನೇತ್ರಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಸಿಂಥಿಯಾ ಅರಣಾಚಲಂ ಮಹಿಳೆಯರ ಸಬಲೀಕರಣ ಪ್ರಕ್ರಿಯೆ ನಡೆಯುತ್ತಿದ್ದರೂ ಇನ್ನೂ ಉದ್ಯೋಗ ರಂಗದಲ್ಲಿ ಮಹಿಳೆಯರನ್ನು ಕೇವಲ ಕೆಳಗಿನ ಹಂತದ ಹುದ್ದೆಗಳಲ್ಲಿ ಸೀಮಿತಗೊಳಿಸಲಾಗಿದೆ. ಅವರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ಉನ್ನತ ಹುದ್ದೆಗಳನ್ನು ವಹಿಸುವಂತಾಗಬೇಕು ಮತ್ತು ಪುರುಷರು ಇದಕ್ಕೆ ಅನುವು ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟರು. ಹಾಗೆಯೇ ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಯೆನೆಪೋಯ ಮೆಡಿಕಲ್ ಕಾಲೇಜಿನ ಫೊರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರಾದ ಡಾ. ವೀಣಾ ವಾಸ್ವಾನಿ ಮಹಿಳಾ ದಿನದ ಸಂದರ್ಭದ ಸಂದೇಶ ನೀಡುತ್ತಾ ಹಿಂದಿನ ಮತ್ತು ಇಂದಿನ ಸಮಾಜದಲ್ಲಿ ಮಹಿಳಾ ಸ್ಥಿತಿಗತಿಯಲ್ಲಾದ ಬದಲಾವಣೆಯ ಬಗ್ಗೆ ಮಾತನಾಡಿ ಮಹಿಳಾ ಸಶಕ್ತತೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರು ಇನ್ನೂ ಬಹಳಷ್ಟು ಸಾಧಿಸಲಿಕ್ಕಿದೆ. ಮಹಿಳೆಯರು ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಸಮಾಜದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಸಿ.ವಿ.ರಘುವೀರ್ ಹಾಗೂ ಯೆನೆಪೋಯ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪದ್ಮಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜಕಾರ್ಯ ಸ್ನಾಕೋತ್ತರ ಪದವಿಯ ವಿದ್ಯಾರ್ಥಿಗಳು ರೋಗಿಗಳ ಮಹಿಳಾ ಸಹಾಯಕರುಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ ಮಹಮ್ಮದ್ ಗುತ್ತಿಗಾರ್ ಸ್ವಾಗತಿಸಿದ್ದು ಸಹಾಯಕ ಪ್ರೊಫೆಸರ್ ಡಾ ಐರಿನ್ ವೇಗಸ್ ವಂದಿಸಿದರು. ಸಮಾಜಕಾರ್ಯ ಸ್ನಾಕೋತ್ತರ ಪದವಿಯ ವಿದ್ಯಾರ್ಥಿನಿ ಕು.ಮೈನಾರಝ್ ಕಾರ್ಯಕ್ರಮ ನಿರೂಪಿಸಿದರು.