×
Ad

ಮಂಗಳೂರು: ವಿವಿ ವಿದ್ಯಾರ್ಥಿಗಳಿಂದ ಭಾರತದ ಏಕತೆ-ಅಖಂಡತೆಗಾಗಿ ತಿರಂಗಾ ರ್ಯಾಲಿ

Update: 2016-03-09 17:10 IST
ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ತಿರಂಗಾ ರ್ಯಾಲಿ ಬುಧವಾರ ನಡೆಯಿತು.  ತಿರಂಗಾ ರ್ಯಾಲಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾರತದ ಏಕತೆ-ಅಖಂಡತೆಗಾಗಿ ತಿರಂಗಾ ರ್ಯಾಲಿಯನ್ನು ಬುಧವಾರ ಮಂಗಳೂರು ವಿವಿ ಮುಖ್ಯದ್ವಾರದಿಂದ ಮಂಗಳಾ ಸಭಾಂಗಣದ ವರಗೆ ನಡೆಸಿ ದೇಶ ದ್ರೋಹಿಗಳ ವಿರುದ್ದ ಘೋಷಣೆ ಕೂಗಿದರು.  100 ಅಡಿ ಉದ್ದದ ತಿರಂಗಾದೊಂದಿಗೆ ರ್ಯಾಲಿ ನಡೆಸಿದ ಸ್ನಾತಕೋತ್ತರ ವಿದ್ಯಾರ್ಥಿಗಳು ಅಪಾರಸಂಖ್ಯೆಯಲ್ಲಿ ವಿವಿಯ ಮಂಗಳಾ ಸಭಾಂಗಣದ ಬಳಿ ಜಮಾಯಿಸಿದರು.

 
ಈ ಸಂದರ್ಭದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸ್ನಾತಕೋತ್ತರ ವಿದ್ಯಾರ್ಥಿ ಶ್ಯಾಂ , ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ದೇಶದ ಅಖಂಡತೆಗೆ ಧಕ್ಕೆ ತರುವ ಕೆಲಸ ಇತ್ತೀಚೆಗೆ ಬಹಳಷ್ಟು ಹೆಚ್ಚುತ್ತಿದ್ದು, ಇದು ಹೀಗೆ ಮುಂದುವರಿದರೆ ಯುವ ವಿದ್ಯಾರ್ಥಿ ಶಕ್ತಿ ಸಹಿಸಲು ಸಾಧ್ಯವಿಲ್ಲ. ಕೆಲವರಿಗೆ ಅಪ್ಜಲ್ ಗುರುವಂತಹ ಉಗ್ರರು ಆದರ್ಶರಾಗುತ್ತಾರೆ. ಇಂತಹ ದೇಶ ವಿರೋದಿ ಹೇಳಿಕೆ ನೀಡುವವರನ್ನು ನಾವು ಬೆಂಬಲಿಸುವುದು ನ್ಯಾಯವೇ ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು ಇದರ ವಿರುದ್ದ ವಿದ್ಯಾರ್ಥಿ ಶಕ್ತಿ ಒಟ್ಟಾಗಬೇಕು ಎಂದು ಹೇಳಿದರು.  ಸ್ನಾತಕೋತ್ತರ ವಿದ್ಯಾರ್ಥಿನಿ ಸುಕ್ಷಿತಾ ಮಾತನಾಡಿ, ಸಾಂಸ್ಕೃತಿಕ ಹಿರಿಮೆಯ ನೆಲವಾದ ಭಾರತ ದೇಶದಲ್ಲಿ ವಾಕ್ ಸ್ವಾತಂತ್ರದ ಹೆಸರಿನಲ್ಲಿ ದೇಶ ದ್ರೋಹದ ಹೇಳಿಕೆ ನೀಡುವವರಿಗೂ ಸಹಕರಿಸುವವರೂ ಇದ್ದಾರೆ ಎಂದರೆ ಅದು ನಾಚಿಕೆಕೇಡು. ದೆಹಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ದೇಶದ್ರೋಹದ ಕೆಲಸ ನಡೆಯುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ದೇಶದಲ್ಲಿ ವೇಮುಲಾ, ಕನ್ನಯ್ಯಿ ಮುಂತಾದ ಘಟನೆಗಳನ್ನು ಮುಂದಿಟ್ಟುಕೊಂಡು ಯುವ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಯತ್ನಗಳು ನಡೆಯುತ್ತಿದ್ದು ಇದರ ವಿರುದ್ದ ವಿದ್ಯಾರ್ಥಿಗಳು ಒಗ್ಗಟ್ಟಾಗಬೇಕು ಎಂದು ವಿದ್ಯಾರ್ಥಿ ಪುನೀತ್ ಅವರು ಅಭಿಪ್ರಾಯ ಪಟ್ಟರು.
 ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಬಾಲಕೃಷ್ಣ ರಾವ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಹೆಚ್ಚಬೇಕು ಈ ನಿಟ್ಟಿನಲ್ಲಿ ವಿವಿಯಲ್ಲಿ ನಡೆದ ತಿರಂಗ ರ್ಯಾಲಿ ಅರ್ಥಪೂರ್ಣವಾದದು ಎಂದು ಹೇಳಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News