×
Ad

ಸಾಹಿತಿ ಪುರಂದರ ಭಟ್‌ಗೆ ಸನ್ಮಾನ, ಸಂವಾದ ಕಾರ್ಯಕ್ರಮ

Update: 2016-03-09 19:01 IST

ಪುತ್ತೂರು: ಸಾತ್ವಿಕ ವಿಡಂಭನೆಯ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಪುರಂದರ ಭಟ್ ಅವರು ಹತ್ತು ಹಲವು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಮೂಲಕ ಸಮಾಜವನ್ನು ನಿರಂತರವಾಗಿ ಎಚ್ಚರಿಸುವ ಕಾರ್ಯ ಮಾಡಿದ್ದಾರೆ ಎಂದು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಹೇಳಿದರು. ಅವರು ಬುಧವಾರ ಪುತ್ತೂರಿನ ಟೌನ್ ಬ್ಯಾಂಕ್ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಸಾಹಿತಿ ಪುರಂದರ ಭಟ್ ಅವರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು. ಸಾತ್ವಿಕ ಸಿಟ್ಟಿನ ಫಲವೇ ಕ್ರೋಧ ಹಾಗೂ ವಿಡಂಭನೆಯಾಗಿದ್ದು, ಸಮಾಜದ ಓರೆಕೊರೆಯನ್ನು ತಿದ್ದುವ ಕಲಾ ಪ್ರಕಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ವಿಡಂಭನೆ ಪ್ರಸಕ್ತ ಸಮಾಜದಲ್ಲಿ ಕಡಿಮೆಯಾಗುತ್ತಿದೆ ಅಭಿಪ್ರಾಯಪಟ್ಟರು.

ವಿಡಂಭನೆಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಪುರಂದರ ಭಟ್ ಅವರು ಸಮಾಜದಲ್ಲಿ ತಪ್ಪುಗಳು ನಡೆದಾಗ ಪುರಂದರ ಭಟ್ ಅವರ ಸಾತ್ವಿಕ ಸಿಟ್ಟು ವಿಡಂಭನೆಗಳಲ್ಲಿ ವ್ಯಕ್ತಗೊಳ್ಳುತ್ತಿತ್ತು ಎಂದರು. ಸಮಾಜವನ್ನು ಟೀಕಿಸಲು, ಎಚ್ಚರಗೊಳಿಸಲು ಎಚ್ಚರ ಬಳಗವನ್ನು ಕಟ್ಟಿಕೊಂಡ ಪುರಂದರ ಭಟ್ ಅವರು ಟ್ರೇಡ್ ಯೂನಿಯನ್ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಹಲವು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡವರು. ಪುತ್ತೂರಿನ ಅನುರಾಗ ವಠಾರದ ಮೂಲಕ ಸಾಹಿತ್ಯ ವಲಯವನ್ನು ಸೃಷ್ಟಿಸುವ ಕೆಲಸ ನಡೆಸಿಕೊಂಡು ಬಂದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಸಂವಾದದಲ್ಲಿ ಮಾತನಾಡಿದ ಬಿ. ಪುರಂದರ ಭಟ್ ಇದು ರಮ್ಯ ಸಂಪ್ರದಾಯದ ಕಾಲವಲ್ಲ. ಬಂಡಾಯ ಸಾಹಿತ್ಯದ ಸಾಲಿನಲ್ಲಿ ವಿಡಂಭನೆಯೂ ಸ್ಥಾನ ಪಡೆಯಿತು. ಧಾರ್ಮಿಕ ಕ್ಷೇತ್ರದಲ್ಲಿ ನಡೆಯಬಾರದ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾದಾಗ ವಿಡಂಭನೆಯೇ ಸೂಕ್ತ ವೇದಿಕೆ ಎಂಬ ನಿರ್ಣಯಕ್ಕೆ ಬಂದೆ. ಸತ್ಯ ಮರೆಮಾಚುವ ಘಟನೆ ಇಷ್ಟವಾಗಲಿಲ್ಲ. ಆದ್ದರಿಂದ ಕೇಮದ್ರುಮ ಎಂಬ ಹೆಸರಿನಲ್ಲಿ ವಿಡಂಭನೆ ರಚಿಸಿದೆ. ಗಜಕೇಸರಿ ಯೋಗದ ವಿರುದ್ಧವೇ ಕೇಮದ್ರುವ. ಎಲ್ಲದಕ್ಕೂ ವಿಘ್ನ ತರುವುದು ಕೇಮದ್ರುವದ ಕಾಯಕ ಎಂದರು.
ವಕೀಲ ಸುಬ್ರಹ್ಮಣ್ಯ ಕೊಳತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂವಾದದಲ್ಲಿ ಹರಿನಾರಾಯಣ ಮಾಡಾವು, ಡಾ.ಎಚ್.ಜಿ.ಶ್ರೀಧರ್ ಮೊದಲಾದವರು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಶ್ರೀಶ ಕುಮಾರ್ ಮತ್ತು ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಫೋಟೋ: ಸನ್ಮಾನ ಪಡೆಯುತ್ತಿರುವ ಸಾಹಿತಿ ಬಿ. ಪುರಂದರ ಭಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News