×
Ad

ಅಫ್‌ಸ್ಪಾ ಹಿಂದೆಗೆದುಕೊಳ್ಳುವವರೆಗೂ ಉಪವಾಸ ನಿಲ್ಲಿಸುವ ಪ್ರಶ್ನೆಯೇ ಇಲ್ಲ:ಇರೋಮ್ ಶರ್ಮಿಳಾ

Update: 2016-03-09 19:06 IST

ಇಂಫಾಲ,ಮಾ.9: ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆ(ಅಫ್‌ಸ್ಪಾ),1958ನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ 2000,ನವೆಂಬರ್ 4ರಿಂದ ಆಮರಣಾಂತ ನಿರಶನವನ್ನು ನಡೆಸುತ್ತಿರುವ ಇರೋಮ್ ಶರ್ಮಿಳಾ ಅವರು ಉಪವಾಸ ಮುಷ್ಕರವನ್ನು ಕೈಬಿಡುವಂತೆ ರಾಜ್ಯದ ಸಮಾಜ ಕಲ್ಯಾಣ ಸಚಿವೆ ಅಕೋಯಿಜಾಮ್ ಮೀರಾಬಾಯಿಯವರ ಮನವಿಯನ್ನು ತಿರಸ್ಕರಿಸಿದ್ದಾರೆ.

ಅಫ್‌ಸ್ಪಾ ಹಿಂದೆಗೆದುಕೊಳ್ಳುವಂತೆ ರಾಜ್ಯ ಸರಕಾರದ ಮನವಿಗೆ ಕೇಂದ್ರವು ಓಗೊಡುತ್ತಿಲ್ಲ ಎಂದು ಶರ್ಮಿಳಾರ ಎದುರು ತನ್ನ ‘ದಾರಿ ತಪ್ಪಿಸುವ ಹೇಳಿಕೆ’ ಯಿಂದಾಗಿ ಮೀರಾಬಾಯಿ ಸರಕಾರಕ್ಕೆ ಮುಜುಗರವನ್ನುಂಟು ಮಾಡಿದ್ದು,ಮಣಿಪುರದ ಕಾಂಗ್ರೆಸ್ ಸರಕಾರವೀಗ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದ್ದ ಮಂಗಳವಾರ ಶಾಸಕಿಯರಾದ ಮೀರಾಬಾಯಿ ಮತ್ತು ಒಕ್ರಂ ಲಾಂಧೋನಿ(ಮುಖ್ಯಮಂತ್ರಿ ಒಕ್ರಂ ಇಬೋಬಿಯವರ ಪತ್ನಿ) ಅವರು ಇಲ್ಲಿಯ ಜೆ.ಎನ್.ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಭದ್ರತಾ ವಾರ್ಡ್‌ನಲ್ಲಿರುವ ಶರ್ಮಿಳಾರನ್ನು ಭೇಟಿಯಾದಾಗ ಈ ಘಟನೆ ನಡೆದಿತ್ತು.

ತಾನೇನೂ ಆಕಾಶದಲ್ಲಿರುವ ಚಂದ್ರನನ್ನು ಕೇಳುತ್ತಿಲ್ಲ. 16 ವರ್ಷಗಳಿಂದ ನಿರಶನ ಕೈಗೊಂಡಿದ್ದರೂ ಸರಕಾರವು ಕುರುಡಾಗಿದೆ ಮತ್ತು ಇದು ಅತ್ಯಂತ ನಿರಾಶಾದಾಯಕವಾಗಿದೆ. ಅಫಸ್ಪಾವನ್ನು ಯಾವಾಗ ಬೇಕಾದರೂ ಹಿಂದೆಗೆದುಕೊಳ್ಳಬಹುದು ಎನ್ನುವುದನ್ನು ತ್ರಿಪುರಾ ತೋರಿಸಿಕೊಟ್ಟಿದೆ ಎಂದು ಶರ್ಮಿಳಾ ಈ ವೇಳೆ ಹೇಳಿದ್ದರು.

  ಅವರನ್ನು ಸಮಾಧಾನಿಸಲು ಪ್ರಯತ್ನಿಸಿದ್ದ ಮೀರಾಬಾಯಿ,ಅಫ್‌ಸ್ಪಾವನ್ನು ಕೇಂದ್ರ ಸರಕಾರವು ಹಿಂದೆಗೆದುಕೊಳ್ಳಬೇಕು ಮತ್ತು ಅದಕ್ಕಾಗಿ ರಾಜ್ಯ ಸರಕಾರವು ಅದರ ಮೇಲೆ ನಿರಂತರವಾಗಿ ಒತ್ತಡವನ್ನು ಹೇರುತ್ತಿದೆ. ಹೀಗಾಗಿ ನೀವು ನಿರಶನವನ್ನು ಕೈಬಿಡಬೇಕು ಮತ್ತು ಅಫ್‌ಸ್ಪಾ ಹಿಂದೆಗೆತಕ್ಕೆ ನಾವೆಲ್ಲರೂ ಆಗ್ರಹವನ್ನು ಮುಂದುವರಿಸಬಹುದು ಎಂದು ಹೇಳಿದ್ದರು.

ಬಹುಶಃ ಕಾನೂನಿನ ಬಗ್ಗೆ ಮೀರಾಬಾಯಿಯವರಿಗೆ ಸ್ಪಷ್ಟವಾದ ಜ್ಞಾನವಿಲ್ಲ. ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳಲು ರಾಜ್ಯ ಸಂಪುಟಕ್ಕೆ ಅಧಿಕಾರವಿದೆ ಎಂದು ನ್ಯಾಯವಾದಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಖೈಡೆಮ್ ಮಣಿ ಹೇಳಿದ್ದರು.

2004,ಆ.12ರಂದು ಇಂಫಾಲ್‌ನ ಏಳು ವಿಧಾನಸಭಾ ಕ್ಷೇತ್ರಗಳಿಂದ ಅಫ್‌ಸ್ಪಾ ಹಿಂದೆಗೆದುಕೊಂಡಿದ್ದಾಗ ರಾಜ್ಯ ಸಂಪುಟವೇ ನಿರ್ಧಾರವನ್ನು ಕೈಗೊಂಡಿತ್ತು ಮತ್ತು ಕೇಂದ್ರದ ಪೂರ್ವಾನುಮತಿಯನ್ನು ಕೋರಲಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೀರಾಬಾಯಿಯವರ ಹೇಳಿಕೆ ರಾಜ್ಯ ಸರಕಾರದ ಮುಜುಗರಕ್ಕೆ ಕಾರಣವಾಗಿದೆ. ನ್ಯಾಯಾಲಯವು ಈ ಹಿಂದೆ ಎರಡು ಬಾರಿ ಶರ್ಮಿಳಾರನ್ನು ಬಿಡುಗಡೆಗೊಳಿಸಿತ್ತು. ಆದರೆ ಅವರು ಮನೆಗೆ ಮರಳುವ ಬದಲು ಉಪವಾಸವನ್ನು ಪುನರಾರಂಭಿಸಿದ್ದರಿಂದ ಎರಡೇ ದಿನಗಳಲ್ಲಿ ಅವರನ್ನು ಮತ್ತೆ ಬಂಧಿಸಲಾಗಿತ್ತು. ಶರ್ಮಿಳಾ ಆತ್ಮಹತ್ಯೆ ಯತ್ನದ ಆರೋಪವನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News