ಭಾರತ-ಪಾಕ್ ವಿಶ್ವಕಪ್ ಪಂದ್ಯ ಕೋಲ್ಕತಾಕ್ಕೆ ಸ್ಥಳಾಂತರ
ಕೋಲ್ಕತಾ, ಮಾ.9: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ ನಡುವೆ ಮಾ.19 ರಂದು ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯವನ್ನು ಕೋಲ್ಕತಾದ ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ.
‘‘ಧರ್ಮಶಾಲಾ ಸ್ಟೇಡಿಯಂನಲ್ಲಿ ಭದ್ರತೆಯ ಭೀತಿ ಎದುರಾದ ಹಿನ್ನೆಲೆಯಲ್ಲಿ ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯವನ್ನು ಕೋಲ್ಕತಾಗೆ ಸ್ಥಳಾಂತರ ಮಾಡಲಾಗಿದೆ’’ ಎಂದು ಐಸಿಸಿ ಮುಖ್ಯ ಕಾರ್ಯಾಧ್ಯಕ್ಷ ಡೇವಿಡ್ ರಿಚರ್ಡ್‌ಸನ್ ಹೊಸದಿಲ್ಲಿಯಲ್ಲಿ ಬುಧವಾರ ಘೋಷಿಸಿದರು.
ಭಾರತ-ಪಾಕ್ ನಡುವಿನ ಬಹುನಿರೀಕ್ಷಿತ ಪಂದ್ಯ ಕೋಲ್ಕತಾಗೆ ವರ್ಗಾವಣೆಯಾಗುವ ಮೂಲಕ ಕಳೆದ ಕೆಲವು ವಾರಗಳಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಭಾರತ-ಪಾಕ್ ವಿಶ್ವಕಪ್ ಪಂದ್ಯಕ್ಕೆ ತನ್ನ ಸರಕಾರದಿಂದ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹೇಳಿಕೆ ನೀಡುವ ಮೂಲಕ ಗೊಂದಲ ಆರಂಭವಾಗಿತ್ತು.
ಭದ್ರತೆಯ ಕಾರಣದಿಂದಾಗಿ ಪಂದ್ಯದ ಸ್ಥಳವನ್ನು ಬದಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯ ಬಹಿರಂಗ ಹೇಳಿಕೆ, ಪಂದ್ಯಕ್ಕೆ ಅಡ್ಡಿಪಡಿಸುವುದಾಗಿ ಸಂಘಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ ಪಂದ್ಯ ನಡೆಯುವ ಬಗ್ಗೆ ಆತಂಕ ಉಂಟಾಗಿತ್ತು. ಪಂದ್ಯ ಸ್ಥಳಾಂತರವಾಗಿದ್ದರಿಂದ ಕೆಲವರಿಗೆ ಬೇಸರವಾಗಿರಬಹುದು. ಆದರೆ, ಸುರಕ್ಷತೆ ಹಾಗೂ ಭದ್ರತೆಯು ಐಸಿಸಿಗೆ ಅತ್ಯಂತ ಮುಖ್ಯ. ನಮ್ಮ ಭದ್ರತಾ ಸಲಹೆಗಾರರು ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಲಹೆಯನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ’’ ಎಂದು ರಿಚರ್ಡ್‌ಸನ್ ತಿಳಿಸಿದರು.
ಆನ್‌ಲೈನ್‌ನಲ್ಲಿ ಭಾರತ-ಪಾಕ್ ಪಂದ್ಯಗಳ ಟಿಕೆಟ್ ಖರೀದಿಸಿದವರಿಗೆ ಹಣವನ್ನು ಮರುಪಾವತಿಸಲಾಗುತ್ತದೆ ಇಲ್ಲವೇ ಕೋಲ್ಕತಾದಲ್ಲಿ ನಡೆಯುವ ಪಂದ್ಯಕ್ಕೆ ಟಿಕೆಟ್‌ನ್ನು ವಿನಿಮಯ ಮಾಡುವ ಅವಕಾಶ ನೀಡಲಾಗುತ್ತದೆ ಎಂದು ರಿಚರ್ಡ್‌ಸನ್ ತಿಳಿಸಿದರು.
ಧರ್ಮಶಾಲಾದಲ್ಲಿ ನಿಗದಿಯಾಗಿರುವ ಭಾರತ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಭದ್ರತೆಯ ಭೀತಿಯನ್ನು ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಪಾಕಿಸ್ತಾನ ತಂಡ ಭಾರತಕ್ಕೆ ತೆರಳದಂತೆ ತಡೆಹಿಡಿದಿತ್ತು. ಕಳೆದ ತಡರಾತ್ರಿ ಈ ಬೆಳವಣಿಗೆ ನಡೆದಿದೆ. ವೇಳಾಪಟ್ಟಿಯನ್ವಯ ಪಾಕಿಸ್ತಾನ ತಂಡ ಬುಧವಾರ ಸಂಜೆ ಭಾರತಕ್ಕೆ ಆಗಮಿಸಬೇಕಾಗಿತ್ತು. ಕೋಲ್ಕತಾದಲ್ಲಿ ಮಾ..12 ರಂದು ಬಂಗಾಳ, ಮಾ.14 ರಂದು ಶ್ರೀಲಂಕಾದ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ಮಾ.20ರ ತನಕ ಕೋಲ್ಕತಾದಲ್ಲೇ ಉಳಿಯಲಿದೆ.
..........