ಪ್ರವಾದಿ ಬಗ್ಗೆ ಅವಹೇಳನಕಾರಿ ಕಮೆಂಟ್ : ವಿಷಾದ ವ್ಯಕ್ತಪಡಿಸಿದ ' ಮಾತೃಭೂಮಿ'
ಪ್ರವಾದಿ ಕುರಿತು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ‘ತೀವ್ರ ಅವಹೇಳನಕಾರಿ’ ಕಮೆಂಟ್‌ಗೆ ಮಾತೃಭೂಮಿ ದೈನಿಕ ಗುರುವಾರ ತನ್ನ ಮುಖಪುಟದಲ್ಲಿ ಪ್ರಾಮುಖ್ಯತೆಯೊಂದಿಗೆ ವಿಷಾದ ವ್ಯಕ್ತಪಡಿಸಿದೆ. ಅದರ ಅನುವಾದ ಇಲ್ಲಿದೆ.
ಮಾತೃಭೂಮಿ ವಿಷಾದಿಸುತ್ತದೆ
2016 ಮಾರ್ಚ್ 6, ರವಿವಾರ ಪುನರ್‌ಜನಿ ವನಿತಾ ವಕೀಲರ ಸಮಿತಿ ಕ್ಯಾಲಿಕಟ್‌ನಲ್ಲಿ ಏರ್ಪಡಿಸಿದ್ದ ‘ಗೃಹಪೀಡನಾ ತಡೆ ನಿಯಮ’ ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಜಸ್ಟೀಸ್ ಕಮಾಲ್ ಪಾಷ ನಡೆಸಿದ ಭಾಷಣದ ಕೆಲ ವಿಷಯಗಳಿಗೆ ಸಾಮಾಜಿಕ ಜಾಲತಾಣಗಳಿಂದ ಬಂದ ಪ್ರತಿಕ್ರಿಯೆಗಳಲ್ಲಿ ಕೆಲವು ಮಾರ್ಚ್ 9 ಕೋಝಿಕ್ಕೋಡ್ ‘ನಗರಂ’ ಎರಡನೆ ಪೇಜ್‌ನ ಆಪ್‌ಸ್ಟಾಕ್ ಎಂಬ ಲೇಖನದಲ್ಲಿ ಹಾಗೂ ಮಾರ್ಚ್ 8 ತೃಶೂರ್ ‘ನಗರಂ’ ಮೂರನೆ ಪೇಜ್‌ನ ‘ಇಡಪೆಡಲ್’ ಎಂಬ ಲೇಖನಗಳಲ್ಲಿ ಮಾತ್ರ ಪ್ರಕಟಿಸಲಾಗಿತ್ತು. ಆ ಪ್ರತಿಕ್ರಿಯೆಗಳು ಧರ್ಮಭಕ್ತರನ್ನು ನೋಯಿಸಿವೆ ಎಂದು ಅರಿವಾಗಿದೆ. ಅವು ಪ್ರಕಟವಾಗಿದ್ದಕ್ಕೆ ತೀವ್ರವಾಗಿ ವಿಷಾದಿಸುತ್ತೇವೆ.
-ಸಂಪಾದಕ
ಕ್ರಮಕ್ಕೆ ಮನವಿ
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಮರ್ಶೆಗಳನ್ನು ಪೋಸ್ಟ್ ಮಾಡಿದವರ ವಿರುದ್ಧ ಅತ್ಯಂತ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾತೃಭೂಮಿ ಆಡಳಿತ ಮಂಡಳಿ ಸರಕಾರಕ್ಕೆ ಮನವಿ ಮಾಡಿದೆ. ಮಾತೃಭೂಮಿಯಲ್ಲಿ ಈ ವಿಮರ್ಶೆಗಳು ನಿರ್ಲಕ್ಷದಿಂದ ಯಥಾವತ್ ಪ್ರಕಟವಾಗಿವೆ. ಇದಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ತೀರ್ಮಾನಿಸಿದೆ.
-------------------------------------------------------------------------------------------------------------------------
ತಿರುವನಂತಪುರಮ್ ,ಮಾ. 9 : ಮಳಯಾಳಂ ದಿನಪತ್ರಿಕೆ ಮಾತೃಭೂಮಿ ಪತ್ರಿಕೆಯ ಸಾಮಾಜಿಕ ಜಾಲತಾಣದ ವಿಭಾಗದಲ್ಲಿ ಪ್ರವಾದಿಯವರ ಕುರಿತು ಪ್ರಕಟವಾಗಿದ್ದ ' ಅವಹೇಳನಕಾರಿ' ಕಮೆಂಟ್ ಗೆ ಪತ್ರಿಕೆ ಕ್ಷಮೆ ಯಾಚಿಸಿದೆ. ಕೇರಳ ಹೈ ಕೋರ್ಟ್ ನ ನ್ಯಾಯಾಧೀಶ ಕಮಾಲ್ ಪಾಶಾ ಅವರು ಮುಸ್ಲಿಂ ಸಮುದಾಯದಲ್ಲಿರುವ ಬಹುಪತ್ನಿತ್ವ ಹಾಗು ಮುಸ್ಲಿಂ ಪರ್ಸನಲ್ ಲಾ ಕುರಿತು ಮಾತನಾಡಿದ ವರದಿಗೆ ಪ್ರತಿಕ್ರಿಯೆಯಾಗಿ ಮಾತೃಭೂಮಿ ತನ್ನ ಆಪ್ಸ್ ಟಾಕ್ ವಿಭಾಗದಲ್ಲಿ ಓದುಗರ ಪ್ರತಿಕ್ರಿಯೆಗಳನ್ನು ಪ್ರಕಟಿಸಿತ್ತು. ಆ ಪೈಕಿ ಒಂದು ಪ್ರತಿಕ್ರಿಯೆಯಲ್ಲಿ ಪ್ರವಾದಿ ಹೆಸರು ಹೇಳದೆ ಅವರ ಬಗ್ಗೆ ' ಅತ್ಯಂತ ಅವಹೇಳನಕಾರಿ' ಮಾತನ್ನು ಹೇಳಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಪತ್ರಿಕೆಗೆ ಹರಿದು ಬಂದಿದೆ. ಜೊತೆಗೆ ಪತ್ರಿಕೆ ಕ್ಷಮೆ ಯಾಚಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಯಿತು. ದಿನವಿಡೀ ಪಿ ಎಫ್ ಐ , ಎಸ್ ಡಿ ಪಿ ಐ ಸಹಿತ ಇತರ ಹಲವು ಸಂಘಟನೆಗಳು ಬೇರೆ ಬೇರೆ ಕಡೆಗಳಲ್ಲಿ ಪತ್ರಿಕೆಯ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದವು. ಜನರು ಪತ್ರಿಕೆಯನ್ನು ಸುಟ್ಟು ಹಾಕುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಂದವು.
ಸಂಜೆ ವೇಳೆಗೆ ಮಾತೃಭೂಮಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಗು ಟಿವಿ ಚಾನೆಲ್ ನಲ್ಲಿ ಪ್ರಾಮುಖ್ಯತೆಯೊಂದಿಗೆ ಕ್ಷಮೆ ಯಾಚನೆ ಪ್ರಕಟಿಸಿತು.
photos from
thenewsminute.com