ಹಿರಿಯಡ್ಕ ಎಸ್ಸೈ ಅಮಾನತಿಗೆ ಆಗ್ರಹಿಸಿ ಧರಣಿ
ಉಡುಪಿ, ಮಾ.9: ದಲಿತ ಯುವಕರ ಮೇಲೆ ಸರಣಿ ದೌರ್ಜನ್ಯ ನಡೆಸಿದ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎಂ.ರಫೀಕ್‌ರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಅವರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ನಿಯಮದಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಹಿರಿಯಡ್ಕದ ದಲಿತ ಹಿತರಕ್ಷಣಾ ಸಮಿತಿ ಬುಧವಾರ ಉಡುಪಿ ಬಸ್‌ನಿಲ್ದಾಣದ ಬಳಿ ಧರಣಿ ನಡೆಸಿತು.
ಹಿರಿಯಡ್ಕ ಠಾಣಾಧಿಕಾರಿಯವರ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ಲಿಖಿತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಾಗೂ ನಮ್ಮ ಪ್ರತಿಭಟನಾ ಹಕ್ಕನ್ನು ಕಸಿದುಕೊಂಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ವಿರುದ್ಧವೂ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಮಿತಿಯ ಸಂಚಾಲಕ ದೇಜಪ್ಪ ಕರ್ಕೇರ ಒತ್ತಾಯಿಸಿದರು.
ಕಳೆದ ಫೆ.20ರಂದು ನಡೆದ ಜಿಪಂ-ತಾಪಂ ಚುನಾವಣೆಯ ಸಂದರ್ಭದಲ್ಲಿ ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಮದ ಮುಂಡುಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಎಂ.ರಫೀಕ್ ಅವರು ಅನಗತ್ಯ ಲಾಠಿಚಾರ್ಜ್ ಮಾಡಿದ್ದಲ್ಲದೇ, ಶಾಲಾ ಸಮೀಪದಲ್ಲಿರುವ ಸದಾನಂದ ಶೆಟ್ಟಿ ಎಂಬವರ ಮನೆಯ ಆವರಣದಲ್ಲಿ ಕೆಲಸ ಮಾಡಿಕೊಂಡಿದ್ದ ಕೊರಗ ಸಮುದಾಯದ ಕಿರಣ್ (19) ಎಂಬ ಯುವಕನಿಗೆ ಹಲ್ಲೆ ನಡೆಸಿದ್ದರು. ಅಲ್ಲದೇ ಫೆ.22ರಂದು ಹಿರಿಯಡ್ಕ ಸಮೀಪದ ಗುಡ್ಡೆಯಂಗಡಿಯಲ್ಲಿ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸುದರ್ಶನ್ (19) ಎಂಬ ಪರಿಶಿಷ್ಟ ಜಾತಿಯ ತರುಣನನ್ನು ಹೆಲ್ಮೆಟ್ ಇಲ್ಲದ ಕಾರಣಕ್ಕಾಗಿ ತಡೆದು ನಿಲ್ಲಿಸಿ ರಫೀಕ್ ಹಾಗೂ ಪೊಲೀಸ್ ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಹತ್ತು ದಿನಗಳೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಂಕರ ಮಡಿಬೆಟ್ಟು, ಸುರೇಶ್ ಕೊಂಡಾಡಿ, ರಮೇಶ್ ಮಂಜೊಟ್ಟಿ, ಶಂಕರ ಎಂ., ಬಾಬು ಹಿರಿಯಡ್ಕ, ರಘು, ಬಬಿತಾ, ರೇಖಾ, ಮಲ್ಲಿಕಾ, ವಿಮಲಾ ಮುಂತಾದವರು ಭಾಗವಹಿಸಿದ್ದರು.
ಎಸ್ಪಿ ಎಣ್ಣಾಮಲೈ ಸ್ಪಷ್ಟೀಕರಣ
ತನ್ನ ಹಾಗೂ ಹಿರಿಯಡ್ಕ ಪಿಎಸ್‌ಐಯ ವಿರುದ್ಧ ಕ್ರಮ ಜರಗಿಸಬೇಕೆಂದು ಒತ್ತಾಯಿಸಿ ಹಿರಿಯಡ್ಕದ ದಲಿತ ಹಿತರಕ್ಷಣಾ ಸಮಿತಿ ನಡೆಸಿದ ಪ್ರತಿಭಟನೆ ಹಾಗೂ ಮಾಡಿರುವ ಆರೋಪಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸ್ಪಷ್ಟೀಕರಣ ನೀಡಿದ್ದಾರೆ.
ಹಿರಿಯಡ್ಕದ ದಲಿತ ಹಿತರಕ್ಷಣಾ ಸಮಿತಿಯ ಸಂಚಾಲಕ ದೇಜಪ್ಪಕರ್ಕೇರರ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿವೆ. ದಾಖಲಾದ ಎಲ್ಲ ಪ್ರಕರಣಗಳಲ್ಲಿ ಹಿರಿಯಡ್ಕ ಠಾಣೆಯ ಪಿಎಸ್ಸೈ ತನಿಖಾಧಿಕಾರಿಯಾಗಿದ್ದು, ಈ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸುವ ಉದ್ದೇಶದಿಂದ ದೇಜಪ್ಪ ಪಿಎಸ್ಸೈ ವಿರುದ್ಧ ಈ ರೀತಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.