ಮಂಗಳೂರು: ಎ.ಜೆ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ

Update: 2016-03-10 12:54 GMT

 ಮಂಗಳೂರು,ಮಾ.10:ನಗರದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ನೇತೃತ್ವದಲ್ಲಿ ರೆನಲ್ ಕೋಆರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್‌ಪ್ಲಾಂಟೆಷನ್ ಸಹಯೋಗದಲ್ಲಿ ಇಂದು ವಿಶ್ವ ಕಿಡ್ನಿ ದಿನಾಚರಣೆಯನ್ನು ಆಸ್ಪತ್ರೆಯ ಕಾನ್ಪರೆನ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.

     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರುನ ಝಡ್‌ಸಿಸಿಕೆಯ ಹಿರಿಯ ಅಂಗಾಂಗ ಕಸಿ ಸಂಯೋಜಕಿ ಪ್ಯಾಟ್ರಿಸಿಯ ವೀಗೋ ಅವರು ಅಂಗಾಂಗ ದಾನ ಮಾಡಲು ಒಪ್ಪುವ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಅಂಗಾಂಗ ಪಡೆಯಲು ಹೆಸರು ನೋಂದಾಯಿಸಿರುವ ರೋಗಿಗಳಿಗೆ ನೀಡಲು ಬೇಕಾದ ವ್ಯವಸ್ಥೆಯನ್ನು ಕ್ರಮಬದ್ದವಾಗಿ ಮಾಡುತ್ತಿರುವ ಪರಿಣಾಮ ಇಂದು ಅಗತ್ಯವಿರುವ ಹಲವು ಮಂದಿ ಅಂಗಾಂಗಗಳನ್ನು ಪಡೆದು ಸುಖಮಯ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎ.ಜೆ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ್ ಮಾರ್ಲ ಕಿಡ್ನಿ ದಾನದಿಂದ ಮತ್ತೊಬ್ಬರ ಬದುಕಿನಲ್ಲಿ ಸಂತೋಷವನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡ ಫಾರೂಕ್ ಎಂಬವರು ಅಭಿಪ್ರಾಯವನ್ನು ವ್ಯಕ್ತಪಡಿಸಿ ಕಿಡ್ನಿ ಸಮಸ್ಯೆಯಿಂದ ಹಲವು ವರ್ಷಗಳಿಂದ ನರಕಯಾತನೆಯನ್ನು ಅನುಭವಿಸಿದ್ದೆ. ನನ್ನ ಪತ್ನಿಯೆ ಕಿಡ್ನಿ ದಾನ ಮಾಡಿದ್ದರಿಂದ ಕಿಡ್ನಿ ಕಸಿ ಮಾಡಿಸಿಕೊಂಡು ಇದೀಗ ಸಂತೋಷದಲ್ಲಿದ್ದೇನೆ. ಕಿಡ್ನಿ ರೋಗಿಗಳಿಗೆ ಅನುಕೂಲವಾಗುವಂತಹ ಸರಕಾರದ ಯೋಜನೆಗಳು ಇಲ್ಲದಿರುವುದು ಮಧ್ಯಮವರ್ಗದವರಿಗೆ ಬಹಳಷ್ಟು ಅನಾನುಕೂಲವಾಗಿದೆ. ಈ ನಿಟ್ಟಿನಲ್ಲಿ ಸರಕಾರಗಳು ಗಮನಹರಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಅಮಿತಾ ಮಾರ್ಲ, ಡಾ.ಸುನೀಲ್ ಪಿ.ಶೆಣೈ, ಪ್ರೀತಂ ಶರ್ಮ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಅಂಗಾಂಗ ದಾನಕ್ಕೆ ಸಂಬಂಧಪಟ್ಟಂತೆ ಆಯೋಜಿಸಲಾಗಿದ್ದ ಸ್ಲೋಗನ್ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News