ಮಹಿಳೆ ಅಕ್ರಮಸಾಗಾಟ ತಡೆಗೆ ಕ್ರಮ: ಮಂಜುಳಾ ಮಾನಸ
ಮಂಗಳೂರು,ಮಾ.10: ಮಹಿಳೆಯರ ಅಕ್ರಮ ಸಾಗಾಟದ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಬಜೆಟ್ ಅಧಿವೇಶನ ಮುಗಿದ ನಂತರ ಈ ಬಗ್ಗೆ ಸಭೆ ನಡೆಸುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಿಳೆಯರು ಮತ್ತು ಮಕ್ಕಳ ಅಕ್ರಮಸಾಗಾಟ ಈಗಲೂ ನಡೆಯುತ್ತಿದೆ. ನಾಪತ್ತೆ ಪ್ರಕರಣಗಳಲ್ಲಿ ಹಲವಾರು ಅಕ್ರಮಸಾಗಾಟದಿಂದಲೇ ಆಗಿವೆ ಎನ್ನುವ ಮಾಹಿತಿ ದೊರೆತಿದೆೆ ಎಂದು ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ಮಹಿಳಾ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆದರೆ ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಕ್ರಮಕೈಗೊಳ್ಳುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇಂತಹ ಸಮಿತಿಗಳಿದ್ದು, ಕೆಲವೆಡೆಗಳಲ್ಲಿ ಈ ಸಮಿತಿಗಳ ಪ್ರಗತಿ ಪರಿಶೀಲನೆ ನಡೆದಿದೆ. ಗದಗ್, ಕೊಪ್ಪಳ, ಬಾಗಲಕೋಟೆ,ಬೀದರ್‌ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಬೆ ನಡೆದಿಲ್ಲ. ದ.ಕ. ಜಿಲ್ಲೆಯಲ್ಲಿ ಚುನಾವಣೆ ನಡೆದ ಬಳಿಕ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಶೀಘ್ರದಲ್ಲೇ ಈ ಸಮಿತಿಯ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಅವರು ಹೇಳಿದರು.