ಮಂಗಳೂರು: ಎಂಪಿ, ಎಂಎಲ್‌ಎ ಕ್ಷೇತ್ರಗಳಿಗೆ ಶೇಕಡ 50 ಸಾಧ್ಯತೆ, ಮಂಜುಳಾ ಮಾನಸ
ಮಂಗಳೂರು,ಮಾ.10: ಮುಂದಿನ ದಿನಗಳಲ್ಲಿ ಲೋಕಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಬರುವ ಸಾಧ್ಯತೆಯಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.
ನಗರದ ಸೈಂಟ್ ಆ್ಯಗ್ನೆಸ್ ಕಾಲೇಜಿನ ರಾಜ್ಯಶಾಸ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಭಾರತದ ರಾಜಕೀಯದಲ್ಲಿ ಯುವಜನರ ಪಾತ್ರ’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಸಂಸತ್ತು, ವಿಧಾನಸಭೆಗಳಲ್ಲಿ ಹೆಚ್ಚಿನ ಮೀಸಲು ಬರುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿನಿ- ಯುವತಿಯರು ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು .ಮಹಿಳೆಯರು ಸೇರಿದಂತೆ ವಿದ್ಯಾವಂತ ಯುವಜನತೆ ರಾಜಕೀಯದಲ್ಲಿ ಸಕ್ರಿಯ ಸಹಭಾಗಿತ್ವದಿಂದ ದೂರ ಉಳಿಯುತ್ತಿದ್ದಾರೆ. ವಿದ್ಯಾವಂತರು ಮತದಾನ ಮಾಡಲು ಕೂಡ ಮುಂದೆ ಬರುತ್ತಿಲ್ಲ. ರಾಜಕೀಯ ಪಕ್ಷಗಳು ಕೂಡ ಯುವಕರನ್ನು ರಾಜಕೀಯಕ್ಕೆ ಆಕರ್ಷಿಸುತ್ತಿಲ್ಲ. ರಾಜಕೀಯದಲ್ಲಿ ಆದರ್ಶ ವ್ಯಕ್ತಿಗಳ ಕೊರತೆಯೂ ಕಾಡುತ್ತಿದೆ. ಹಿಂದೆ ರಾಜಕಾರಣಿ ಎಂದರೆ ದೇಶ ಕಟ್ಟುವವರು ಎಂಬ ಭಾವನೆ ಇದ್ದರೆ, ಈಗ ಕೀಚಕನಂತೆ ಕಾಡುವವ ರಾಜಕಾರಣಿ ಎಂಬಂತಾಗಿದೆ. ಒಳ್ಳೆಯ ನಿರ್ಧಾರಗಳಿಗಾಗಿ ವಿದ್ಯಾವಂತರು ರಾಜಕೀಯಕ್ಕೆ ಬರುವುದು ಅನಿವಾರ್ಯ ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಸದನದಲ್ಲಿ ಜೆ.ಎಚ್.ಪಟೇಲ್, ರಮೇಶ್ ಕುಮಾರ್ ಮುಂತಾದವರ ಮಾತುಗಾರಿಕೆ ಯುವಜನತೆಯನ್ನು ಉತ್ತೇಜಿಸುವಂತಿದ್ದರೆ, ಈಗ ಸದನದಲ್ಲಿ ಕ್ಷುಲ್ಲಕ ವಿಚಾರಗಳಿಗೆ ದಿನವಿಡೀ ಚರ್ಚಿಸಿ ಲಕ್ಷಾಂತರ ರೂ. ವ್ಯಯ ಮಾಡಲಾಗುತ್ತಿದೆ. ಇಂಥವರು ನಮ್ಮ ಯುವ ಜನಾಂಗಕ್ಕೆ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಿಲ್ಲ ಎಂದು ಅವರು ವಿಷಾದಿಸಿದರು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಸುಪ್ರಿಯಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗೋಷ್ಠಿಯಲ್ಲಿ ಮಾಜಿ ಸಂಸದೆ ತೇಜಸ್ವಿನಿ ಗೌಡ ವಿಚಾರ ಮಂಡಿಸಿದರು.