ನಾಳೆ ಮನಪಾ ಮೇಯರ್- ಉಪಮೇಯರ್ ಚುನಾವಣೆ: ಹರಿನಾಥ್‌ಗೆ ಮೇಯರ್ ಸ್ಥಾನ?
ಮಂಗಳೂರು, ಮಾ.10: ಮಹಾನಗರಪಾಲಿಕೆಯ 18ನೆ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಮಾ.11 ರಂದು ಪೂರ್ವಾಹ್ನ 11:30ಕ್ಕೆ ಮನಪಾ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.
60 ಸದಸ್ಯರಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಬ್ಬರು ಸದಸ್ಯರನ್ನು ಹೊಂದಿದೆ. ಪ್ರಸಕ್ತ ಸಾಲಿನ ಮೇಯರ್ ಗಾದಿಯು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಹಿರಿಯ ಸದಸ್ಯರಾದ ಕಾಂಗ್ರೆಸ್‌ನ ಹರಿನಾಥ್‌ಗೆ ಮೇಯರ್ ಸ್ಥಾನ ಬಹುತೇಕ ಖಚಿತಗೊಂಡಿದ್ದು, ಈ ಬಗ್ಗೆ ಪಕ್ಷದ ಪಾಳಯದಲ್ಲಿ ಗುರುವಾರ ರಾತ್ರಿುವರೆಗೂ ಬಿರುಸಿನ ಚರ್ಚೆ ನಡೆದಿದೆ.
ಮೇಯರ್ ಸ್ಥಾನದ ಆಕಾಂಕ್ಷಿಗಳ ಪಟ್ಟಿಯು ದೊಡ್ಡದಾಗಿದ್ದು, ಭಾಸ್ಕರ ಮೊಯ್ಲಿಯವರ ಹೆಸರನ್ನು ಅಂತಿಮಗೊಳಿಸುವ ಬಗ್ಗೆಯೂ ಮಾತುಗಳು ಪಕ್ಷದ ವಲಯದಿಂದ ಕೇಳಿಬಂದಿದೆ. ಇದರೊಂದಿಗೆ ಈ ಬಾರಿ ಮುಸ್ಲಿಮ್ ಸಮುದಾಯದ ಅಭ್ಯರ್ಥಿಗೆ ಮೇಯರ್ ಸ್ಥಾನ ನೀಡಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ಮೇಯರ್ ಅಕಾಂಕ್ಷಿಗಳ ಸಾಲಿನಲ್ಲಿ ಕೆ. ಮುಹಮ್ಮದ್, ಅಬ್ದುರ್ರವೂಫ್ ಹೆಸರೂ ಕೇಳಿಬಂದಿದೆ.
ಮೀಸಲಾತಿ ಪ್ರಭಾವ: ಉಪ ಮೇಯರ್ ಬಿಜೆಪಿಗೆ!
ಮನಪಾದಲ್ಲಿ ಕಾಂಗ್ರೆಸ್ ಪಕ್ಷ ಪ್ರಾಬಲ್ಯವನ್ನು ಹೊಂದಿದ್ದರೂ ಮೀಸಲಾತಿಯ ಹಿನ್ನೆಲೆಯಲ್ಲಿ ಈ ಬಾರಿ ಉಪ ಮೇಯರ್ ಸ್ಥಾನ ಬಿಜೆಪಿ ಅಭ್ಯರ್ಥಿ ಪಾಲಾಗಲಿದೆ. ಉಪ ಮೇಯರ್ ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿರುವುದರಿಂದ ಕಾಂಗ್ರೆಸ್‌ನಲ್ಲಿ ಈ ಮೀಸಲಾತಿಯಡಿ ಅರ್ಹ ಅಭ್ಯರ್ಥಿಗಳು ಇಲ್ಲವಾಗಿದೆ. ಹಾಗಾಗಿ ಬಿಜೆಪಿಯ ಪರಿಶಿಷ್ಟ ಪಂಗಡದ ಏಕೈಕ ಮಹಿಳೆ ಸುಮಿತ್ರಾ ಕರಿಯಾಗೆ ಉಪ ಮೇಯರ್ ಸ್ಥಾನ ದೊರಕಲಿದೆ.
2012-13ನೆ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿತ್ತಾದರೂ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯ ನಾಮಪತ್ರದಲ್ಲಿ ಆದ ಕಣ್ತಪ್ಪಿನಿಂದಾಗಿ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಒಲಿದಿತ್ತು. ಆದರೆ ಈ ಬಾರಿ ಉಪ ಮೇಯರ್ ಸ್ಥಾನ ಬಿಜೆಪಿಗೆ ಮೀಸಲಾತಿ ಮುಖೇನ ಲಭ್ಯವಾಗಲಿದೆ.